ಗಾಝಿಯಾಬಾದ್ (ಉತ್ತರ ಪ್ರದೇಶ): ಕಪ್ಪು, ಬಿಳಿ ಮತ್ತು ಹಳದಿ ಫಂಗಸ್ ರೋಗದಿಂದ ಬಳಲುತ್ತಿದ್ದ 59 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುನ್ವರ್ ಸಿಂಗ್ ಎಂಬ ವ್ಯಕ್ತಿ ಶುಕ್ರವಾರ ರಾತ್ರಿ 7:30 ರ ಸುಮಾರಿಗೆ ಟಾಕ್ಸಿಮಿಯಾ (ಟಾಕ್ಸಿನ್ನಿಂದ ರಕ್ತ ವಿಷಪೂರಿತವಾಗುವುದು) ಕಾರಣ ನಿಧನರಾಗಿದ್ದಾರೆ ಎಂದು ಗಾಜಿಯಾಬಾದ್ನ ರಾಜ್ ನಗರದ ಹರ್ಷ್ ಆಸ್ಪತ್ರೆಯ ಇಎನ್ಟಿ (ಕಿವಿ, ಮೂಗು, ಗಂಟಲು) ತಜ್ಞ ಡಾ.ಬಿ.ಪಿ ತ್ಯಾಗಿ ಮಾಹಿತಿ ನೀಡಿದರು.
ವಕೀಲರಾಗಿದ್ದ ನಗರದ ಸಂಜಯ್ ನಗರದ ಕುನ್ವರ್ ಸಿಂಗ್, ಕೋವಿಡ್ ಸೋಂಕಿನಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 24 ರಂದು ಎಂಡೋಸ್ಕೊಪಿ ಮಾಡುವ ವೇಳೆ ಅವರಲ್ಲಿ ಕಪ್ಪು, ಬಿಳಿ ಮತ್ತು ಹಳದಿ ಫಂಗಸ್ ಕೂಡ ಪತ್ತೆಯಾಗಿತ್ತು ಎಂದು ಡಾ.ತ್ಯಾಗಿ ಹೇಳಿದ್ದಾರೆ.