ನವದೆಹಲಿ/ಗಾಜಿಯಾಬಾದ್: ದೇಶದಲ್ಲಿ ಈಗಾಗಲೇ ಅನೇಕ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿದವರ ಕೊಲೆ ನಡೆದು ಹೋಗಿವೆ. ಇದೀಗ ವೈದ್ಯರೊಬ್ಬರಿಗೆ ಕೊಲೆ ಬೆದರಿಕೆ ಬಂದಿದೆ. ಹಿಂದೂ ಸಂಘಟನೆ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಅಮೆರಿಕ ನಂಬರ್ನಿಂದ ಬೆದರಿಕೆ ಕರೆ ಬಂದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಸಿಹಾನಿ ಗೇಟ್ ಪ್ರದೇಶದಲ್ಲಿ ವಾಸವಾಗಿರುವ ಡಾ. ಅರವಿಂದ್ ವತ್ಸ್ ಅಕೇಲಾ ಅವರು ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಬೆದರಿಕೆ ಹಾಕಲಾಗಿದ್ದು, ಆ ನಂಬರ್ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ವ್ಯಕ್ತಿಯೋರ್ವ ಕರೆ ಮಾಡಿ ನನ್ನೊಂದಿಗೆ ಐದು ನಿಮಿಷಗಳ ಕಾಲ ಮಾತನಾಡಿದ್ದು, 'ನಿನ್ನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ಹಯ್ಯ ಲಾಲ್ ಮತ್ತು ಡಾ. ಉಮೇಶ್ ಅವರನ್ನ ಎಲ್ಲಿಗೆ ಕಳುಹಿಸಿದ್ದಾರೋ ನಿನ್ನನ್ನು ಅಲ್ಲಿಗೆ ಕಳುಹಿಸಲಾಗುವುದು. ನಿನ್ನ ತಲೆ ಕತ್ತರಿಸಲಾಗುವುದು' ಎಂದು ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಥವಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದಲೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ ಎಂದು ಅವರು ಬೆದರಿಕೆ ಹಾಕಿದ್ದಾರೆಂದು ವೈದ್ಯರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.