ನವದೆಹಲಿ/ ಗಾಜಿಯಾಬಾದ್: ಬಿಲ್ಡರ್ ಓರ್ವ ತನ್ನ ನೆರೆಮನೆಯ ಟೆರೇಸ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬನನ್ನು ಶಂಕಿಸಿ ಆತನಿಗೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನ್ನ ಮನೆಯೊಳಗೆ ನುಗ್ಗಲು ಕೆಲವರು ಯತ್ನಿಸಿದಾಗ ತಾನು ಗುಂಡು ಹಾರಿಸಿರುವುದಾಗಿ ಆರೋಪಿ ಬಿಲ್ಡರ್ ಪೊಲೀಸರಿಗೆ ಹೇಳಿದ್ದಾನೆ. ಬಿಲ್ಡರ್ ತನ್ನ ಲೈಸೆನ್ಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಪಕ್ಕದ ಮನೆಯ ಟೆರೇಸ್ ಮೇಲಿದ್ದವನಿಗೆ ಗುಂಡಿಕ್ಕಿ ಕೊಲೆ: ಕಾರಣ ನಿಗೂಢ! ಗಾಜಿಯಾಬಾದ್‌ನ ತಿಲಾ ಮೋರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ಯೋಗೇಂದ್ರ ಮಹಾವೀರ್ ಮಾವಿ ಎಂಬುವರು ತಮ್ಮ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ ಅವರ ಮಗ ನೀರು ಕುಡಿಯಲು ಎದ್ದನು. ಈ ಸಮಯದಲ್ಲಿ ಅಡುಗೆಮನೆಯಲ್ಲಿ ಏನೋ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಆತ ತಂದೆಗೆ ತಿಳಿಸಿದ್ದಾನೆ.
ಯೋಗೇಂದ್ರ ಎದ್ದು ನೋಡಿದಾಗ ತನ್ನ ಮನೆ ಸಮೀಪದ ಟೆರೇಸ್ ಮೇಲೆ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡಿದ್ದಾನೆ. ಅದರಲ್ಲಿ ಕೆಲವರು ತಮ್ಮ ಮನೆಗೆ ನುಗ್ಗಲು ಯತ್ನಿಸುತ್ತಿದ್ದರು. ಹೀಗಾಗಿ ಅವಸರದಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ಬಿಲ್ಡರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಪಕ್ಕದ ಟೆರೇಸ್‌ನಲ್ಲಿದ್ದ ಶಂಕಿತ ವ್ಯಕ್ತಿಗೆ ಗುಂಡು ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡದವರು ಬಂದು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಿಲ್ಡರ್ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಬಗ್ಗೆ ಇದುವರೆಗೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮನೆಯಲ್ಲಿ ಯಾವುದೇ ಕಳ್ಳತನವೂ ನಡೆದಿಲ್ಲ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಅದೇ ವೇಳೆ ಮೃತದೇಹ ಪತ್ತೆಯಾದ ವ್ಯಕ್ತಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮೃತನ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಲೈವ್ ಮರ್ಡರ್ ವಿಡಿಯೋ: ಭೂ ವಿವಾದ ಸಂಬಂಧ ಜನರ ಎದುರೇ ಗುಂಡಿಕ್ಕಿ ವ್ಯಕ್ತಿ ಕೊಲೆ!