ನವದೆಹಲಿ:ಜರ್ಮನಿಯ ತಂತ್ರಜ್ಞಾನ ಹಾಗೂ ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಯುಪಿಐ ತಂತ್ರಜ್ಞಾನ ಬಳಸಿ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಹಣ ಪಾವತಿ ಮಾಡಿದ್ದಾರೆ. ಈ ಬೆನ್ನಲ್ಲೇ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಭಾರತದ ಜರ್ಮನ್ ರಾಯಭಾರಿ ಕಚೇರಿ ಶ್ಲಾಘಿಸಿದೆ. ಇದು ಭಾರತದ ಯಶಸ್ಸಿನ ಕಥೆಗಳಲ್ಲಿ ಒಂದು ಎಂದು ರಾಯಭಾರಿ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ (ಟ್ವಿಟ್ಟರ್) ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿರುವ ಜರ್ಮನ್ ರಾಯಭಾರಿ ಕಚೇರಿ, ''ಭಾರತ ಯಶಸ್ಸಿನ ಕಥೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವೂ ಒಂದು. ಯುಪಿಐ ತಂತ್ರಜ್ಞಾನದ ಮೂಲಕ ಎಲ್ಲರೂ ಕೆಲವೇ ಸೆಕೆಂಡ್ಗಳಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಸಚಿವ ವಿಸ್ಸಿಂಗ್ ಅವರಿಗೆ ಮೊದಲ ಬಾರಿಗೆ ಯುಪಿಐ ಪಾವತಿಯ ಅನುಭವವಾಯಿತು. ಇದು ತುಂಬಾ ಆಕರ್ಷಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜರ್ಮನ್ ಸಚಿವ ವಿಸ್ಸಿಂಗ್ ಅವರು ತರಕಾರಿ ವ್ಯಾಪಾರಿಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಿ ಹಣ ಪಾವತಿ ಮಾಡುವುದನ್ನು ಕಾಣಬಹುದು.
G20 ಸಭೆಯಲ್ಲಿ ಭಾಗವಹಿಸಲು ಜರ್ಮನ್ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಆಗಸ್ಟ್ 18ರಂದು ಬೆಂಗಳೂರಿನಲ್ಲಿ ಆಗಮಿಸಿದ್ದರು. ಬಳಿಕ ಆಗಸ್ಟ್ 19ರಂದು ಇಲ್ಲಿ ನಡೆದ ಜಿ20 ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ ಮಾಡಿದ್ದ ರಾಯಭಾರಿ ಕಚೇರಿ, ಬೆಂಗಳೂರಿನಲ್ಲಿ ಜಿ20 ಸಭೆ ನಡೆಯಲಿದೆ. ಇಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಜರ್ಮನ್ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತ ಮತ್ತು ಜರ್ಮನ್ ನಡುವಿನ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ಡಿಜಿಟಲ್ ಕ್ಷೇತ್ರದಲ್ಲಿ, ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಬಗ್ಗೆ ಉಭಯ ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಈ ಮೊದಲು ತಿಳಿಸಿತ್ತು.