ಭೋಪಾಲ್(ಮಧ್ಯಪ್ರದೇಶ) :ಜಮ್ಮ-ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡಕ್ಕೆ ಸಂಬಂಧಿಸಿದ ಮ್ಯೂಸಿಯಂ ಸ್ಥಾಪಿಸುವುದಾಗಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಘೋಷಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಅಗ್ನಿಹೋತ್ರಿ ಪ್ರಕಟಿಸಿದ್ದಾರೆ. ಇತ್ತ, ಮ್ಯೂಸಿಯಂಗೆ ಅಗತ್ಯ ನೆರವು ಮತ್ತು ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.
ಶುಕ್ರವಾರ ಭೋಪಾಲ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭೇಟಿ ನೀಡಿದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದರು. ನಂತರ ಕಾಶ್ಮೀರಿ ಪಂಡಿತರ ಜತೆಗೂಡಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಿವೇಕ್ ಅಗ್ನಿಹೋತ್ರಿ ಪಾರ್ಕ್‌ನಲ್ಲಿ ಸಸಿಗಳನ್ನು ನೆಟ್ಟರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ಅಗ್ನಿಹೋತ್ರಿ, ತಮ್ಮ ಯೋಜನೆ ಬಗ್ಗೆ ಬಹಿರಂಗ ಪಡಿಸಿದರು. ಭೋಪಾಲ್ನಲ್ಲಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಮ್ಯೂಸಿಯಂ ಸ್ಥಾಪಿಸಲು ಬಯಸಿದ್ದು, ರಾಜ್ಯ ಸರ್ಕಾರದಿಂದ ಅನುಮತಿ ನೀಡಬೇಕು. ಜತೆಗೆ ಅಗತ್ಯವಾದ ಭೂಮಿ ಮಂಜೂರು ಮಾಡಬೇಕು. ಈ ಮ್ಯೂಸಿಯಂ ಮಾನವತ್ವದ ಪ್ರತೀಕವಾಗಲಿದೆ ಎಂದು ಹೇಳಿದರು.
ಇದಕ್ಕೆ ಸ್ಥಳದಲ್ಲೇ ಇದ್ದ ಸಿಎಂ ಶಿವರಾಜ್ ಸಿಂಗ್ ತಕ್ಷಣವೇ ಒಪ್ಪಿಗೆ ಸೂಚಿಸಿದರು. ಮ್ಯೂಸಿಯಂ ಸ್ಥಾಪನೆಯ ಯೋಜನೆಯನ್ನು ತಾವು ಮುಂದುವರೆಸಿ. ಅದಕ್ಕೆ ಬೇಕಾದ ನೆರವು ಹಾಗೂ ಸ್ಥಳವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಅಭಯ ನೀಡಿದರು. ಅಲ್ಲದೇ, ಕಾಶ್ಮೀರದಿಂದ ವಲಸೆ ಬಂದ ಪಂಡಿತರ ಕುಟುಂಬಗಳ ನೋವು ಜಗತ್ತಿಗೆ ತಿಳಿದಿದೆ ಎಂದು ಸಿಎಂ ಹೇಳಿದರು.
ಇದನ್ನೂಓದಿ:ಭೋಪಾಲಿ ಎಂದರೆ 'ಸಲಿಂಗಿ' ಎಂದ ವಿವೇಕ್ ಅಗ್ನಿಹೋತ್ರಿ; ಕಾಂಗ್ರೆಸ್ ಆಕ್ರೋಶ