ಜೈಪುರ (ರಾಜಸ್ಥಾನ): ರಾಜಸ್ಥಾನದ ಉದಯ್‌ಪುರ್‌ದಲ್ಲಿ ಇತ್ತೀಚೆಗೆ ಶಿರಚ್ಛೇದಕ್ಕೊಳಗಾದ ಕನ್ನಯ್ಯ ಲಾಲ್ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿ ಸಂತಾಪ ಸೂಚಿಸಿದರು. ಇದೇ ವೇಳೆ ಕನ್ನಯ್ಯ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಿಎಂ, ಮುಂದೆಯೂ ಅಗತ್ಯ ನೆರವು ಕಲ್ಪಿಸುವುದಾಗಿಯೂ ಭರವಸೆ ನೀಡಿದರು.
ಸಚಿವರೊಂದಿಗೆ ಕನ್ನಯ್ಯ ಲಾಲ್ ನಿವಾಸಕ್ಕೆ ತೆರಳಿದ ಸಿಎಂ ಗೆಹ್ಲೋಟ್, ಮನೆಯಲ್ಲಿದ್ದ ಕನ್ನಯ್ಯ ಭಾವಚಿತ್ರಕ್ಕೆ ಗೌರವ ಅರ್ಪಿಸಿದರು. ನಂತರ ಕುಟುಂಬಸ್ಥರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಯ್ಯ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಎಐ ಶೀಘ್ರವೇ ಪೂರ್ಣಗೊಳಿಸುವ ವಿಶ್ವಾಸ ಇದೆ. ಅಲ್ಲದೇ, ಆದಷ್ಟು ಬೇಗ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಆಗಲಿದೆ. ಇದನ್ನೇ ರಾಜ್ಯ ಮತ್ತುಇಡೀ ದೇಶದ ಜನತೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಈ ಹತ್ಯೆ ಬಗ್ಗೆ ದೇಶಾದ್ಯಂತ ವ್ಯಕ್ತವಾದ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಭಾವನೆಗಳನ್ನೂ ಎನ್ಐಎ ಅರ್ಥ ಮಾಡಿಕೊಳ್ಳುತ್ತದೆ ಎಂದು ಭಾವಿಸಿದ್ದೇನೆ. ಇದು ಧರ್ಮದ ಮೇಲಿನ ಎರಡು ಸಮುದಾಯಗಳ ನಡುವಿನ ಹೋರಾಟವಲ್ಲ. ಈ ಘಟನೆಯಲ್ಲಿ ಭಯೋತ್ಪಾದನೆಯ ನಂಟಿನ ಬಗ್ಗೆ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಪ್ರತಿ ಧರ್ಮದವರೂ ಹತ್ಯೆಗಳನ್ನು ಖಂಡಿಸಬೇಕೆಂದೂ ತಿಳಿಸಿದರು. ಜೊತೆಗೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಸಿಎಂ ಮನವಿ ಮಾಡಿದರು.