ಲೂಧಿಯಾನ (ಪಂಜಾಬ್):ಲೂಧಿಯಾನ ಜಿಲ್ಲೆಯ ಗಿಯಾಸ್‌ಪುರ ಪ್ರದೇಶದಲ್ಲಿ ಇಂದು ಬೆಳಗ್ಗೆ ವೆರ್ಕಾ ಬೂತ್ ಬಳಿ ಅನಿಲ ಸೋರಿಕೆಯಾಗಿ ಐವರು ಮಹಿಳೆಯರು, ನಾಲ್ವರು ಪುರುಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಮೂರ್ಛೆ ತಪ್ಪಿದ್ದಾರೆ. ಗಿಯಾಸ್ಪುರದ ಸುವಾ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಸದ್ಯ ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿದೆ. ಕಾರ್ಖಾನೆಯ ಸಮೀಪದಲ್ಲಿರುವ ಅಕ್ಕಪಕ್ಕದ ಮನೆಯಲ್ಲಿದ್ದ ಜನರು, ಅನಿಲದ ಪ್ರಭಾವಕ್ಕೆ ಉಸಿರಾಡಲು ಸಾಧ್ಯವಾಗದೇ ಮೂರ್ಛೆ ಹೋಗಿದ್ದಾರೆ.
ಮೂಲಗಳ ಪ್ರಕಾರ, ಗ್ಯಾಸ್ ಸೋರಿಕೆಯಿಂದಾಗಿ 300 ಮೀಟರ್ ವ್ಯಾಪ್ತಿಯ ಜನರು ಉಸಿರಾಡಲು ತೊಂದರೆ ಅನುಭವಿಸಿದ್ದಾರೆ. ಆದರೆ ಅನಿಲ ಸೋರಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮೂರ್ಛೆ ತಪ್ಪಿದ ಜನರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಮಾಹಿತಿ ತಿಳಿದ ತಕ್ಷಣವೇ ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಆ ಪ್ರದೇಶದಲ್ಲಿರುವ ಇತರೆ ಜನರು ಗ್ಯಾಸ್ ಪ್ರಭಾವಕ್ಕೆ ಒಳಪಡದಂತೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
ಲೂಧಿಯಾನದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಒಂಬತ್ತು ಮಂದಿ ಸಾವನ್ನು ದೃಢಪಡಿಸಲಾಗಿದೆ. ಅನೇಕರು ಪ್ರಜ್ಞಾಹೀನರಾಗಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ. ಜನರ ಜೀವ ಉಳಿಸುವುದು ನಮ್ಮ ಕರ್ತವ್ಯವಾಗಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಕಾರ್ಖಾನೆಯ ಅಕ್ಕಪಕ್ಕದಲ್ಲಿ ವಾಸವಿದ್ದ ಜನರಿಗೆ ಅಲ್ಲಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಭೋಪಾಲ್ ಅನಿಲ ದುರಂತ: ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿದ್ದ ಕೇಂದ್ರದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್