ನವದೆಹಲಿ : ಜೈಲಿನಲ್ಲಿ ಎರಡು ಗುಂಪುಗಳ ನಡುವಿನ ಗ್ಯಾಂಗ್ ವಾರ್ ನಡೆದಿದೆ. ಕುಖ್ಯಾತ ದರೋಡೆಕೋರ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹವರ್ತಿ ಪ್ರಿನ್ಸ್ ತೆವಾಟಿಯಾನನ್ನ ಶುಕ್ರವಾರ ತಿಹಾರ್ ಜೈಲಿನಲ್ಲಿ ಸಹ ಕೈದಿಗಳು ಹತ್ಯೆ ಮಾಡಿದ್ದಾರೆ. ಕೈದಿಗಳು ತಮ್ಮ ಬ್ಯಾರಕ್ನಿಂದ ಹೊರಗೆ ಬಂದಾಗ ಸಂಜೆ 5.30 ರ ಸುಮಾರಿಗೆ ಘಟನೆ ಸಂಭವಿಸಿದೆ. ಪ್ರಿನ್ಸ್ ನನ್ನು ತಿಹಾರ್‌ನ ಕೇಂದ್ರ ಕಾರಾಗೃಹ ಸಂಖ್ಯೆ 3 ರಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
"ಪ್ರಿನ್ಸ್ ತೆವಾಟಿಯಾ (30) ಮೊದಲು ಅಬ್ದುರ್ ರೆಹಮಾನ್ ಎಂಬ ಮತ್ತೊಬ್ಬ ಕೈದಿಯ ಮೇಲೆ ದಾಳಿ ಮಾಡಿದ್ದ. ಈ ವೇಳೆ ಅಬ್ದುರ್ ಕೂಡ ಪ್ರತಿ ದಾಳಿ ಮಾಡಿದ. ಅನಂತರ ರೆಹಮಾನ್ ಪರಿಚಯಸ್ಥರು ಸಹ ತೆವಾಟಿಯಾ ಮೇಲೆ ಏರಗಿದರು. ಎರಡೂ ಕಡೆಯವರು ಪೋಕರ್ ನಂತಹ ಸುಧಾರಿತ ಆಯುಧಗಳು ಮತ್ತು ಇತರ ಸ್ವಯಂ ನಿರ್ಮಿತ ಆಯುಧಗಳಿಂದ ಪರಸ್ಪರ ದಾಳಿ ಮಾಡಿಕೊಂಡರು" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಜೈಲಿನಲ್ಲಿ ನಡೆದ ಗ್ಯಾಂಗ್ವಾರ್ನಲ್ಲಿ ಮೂರು ಜನ ಗಾಯಗೊಂಡಿದ್ದರು. ತೆವಾಟಿಯಾಗೂ ಗಾಯಗಳಾಗಿದ್ದು, ಕೂಡಲೇ ಆತನನ್ನು ಜೈಲು ಸಂಖ್ಯೆ 3 ರಲ್ಲಿಯ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ. ಈ ಕುರಿತು ಎಫ್‌ಐಆರ್ ದಾಖಲಿಸಲಾಗುತ್ತಿದ್ದು, ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ :ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗ್ಯಾಂಗ್ನಿಂದ ಹಲ್ಲೆ: ಸಿಸಿಟಿವಿ ದೃಶ್ಯ