ಛಾಪ್ರಾ(ಬಿಹಾರ):ಭಾರತದಲ್ಲಿ ತಯಾರಾದ, ವಿಶ್ವದ ಅತಿದೊಡ್ಡ ವಿಹಾರ ನೌಕೆಯಾದ ಎಂವಿ ಗಂಗಾ ವಿಲಾಸ್ ಬಿಹಾರದ ಛಾಪ್ರಾದಲ್ಲಿ ನದಿ ಮಧ್ಯೆಯೇ ಸಿಲುಕಿದ ಘಟನೆ ನಡೆದಿದೆ. ಕಡಿಮೆ ನೀರಿನಿಂದಾಗಿ ನಿಗದಿತ ನಿಲುಗಡೆ ಸ್ಥಾನಕ್ಕೆ ನೌಕೆ ಮುಟ್ಟಲಾಗಿಲ್ಲ. ಬಳಿಕ ಅದರಲ್ಲಿದ್ದ 32 ಸ್ವಿಡ್ಜರ್ಲ್ಯಾಂಡ್ಸ್ ಪ್ರಯಾಣಿಕರನ್ನು ಇನ್ನೊಂದು ದೋಣಿಯ ಸಹಾಯದಿಂದ ದಡಕ್ಕೆ ಕರೆತರಲಾಗಿದೆ.
3 ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿಯಲ್ಲಿ ವಿಹಾರ ದೋಣಿಗೆ ಚಾಲನೆ ನೀಡಿದ್ದರು. ಇಂದು ಬಿಹಾರದ ಛಾಪ್ರಾಕ್ಕೆ ತಲುಪಿದಾಗ ನಿಲುಗಡೆಗೆ ಸೂಚಿಸಲಾಗಿದ್ದ ಸ್ಥಳದಲ್ಲಿ ನೀರು ಕಡಿಮೆ ಇದ್ದ ಪರಿಣಾಮ, ನದಿ ಮಧ್ಯದಲ್ಲೇ ನಿಲ್ಲಿಸಲಾಗಿದೆ. ದೋಣಿ ಇಲ್ಲಿ ತಂಗಿದ್ದು, ಪ್ರಯಾಣಿಕರು ಡೋರಿ ಗಂಜ್‌ನ ಚಿರಂದ್ ಪುರಾತತ್ವ ತಾಣದ ವೀಕ್ಷಣೆ ಮಾಡಬೇಕಿತ್ತು.
ಓದಿ:ಫೋಟೋಗಳಲ್ಲಿ ನೋಡಿ.. ವಿಶ್ವದ ಅತಿ ದೀರ್ಘ ಪ್ರಯಾಣದ ಗಂಗಾ ವಿಲಾಸ್ ಐಷಾರಾಮಿ ಪ್ರವಾಸಿ ನೌಕೆ
ನೀರಿನ ಕೊರತೆಯಿಂದಾಗಿ ನದಿ ಮಧ್ಯೆಯೇ ನೌಕೆ ಲಂಗರು ಹಾಕಿತು. ಬಳಿಕ ನೌಕೆಯಲ್ಲಿದ್ದ 32 ಸ್ವಿಡ್ಜರ್ಲ್ಯಾಂಡ್ಸ್ನ ಪ್ರಯಾಣಿಕರನ್ನು ಇನ್ನೊಂದು ದೋಣಿಯ ಸಹಾಯದಿಂದ ಕರೆತಂದು, ಅವರಿಗೆ ಪುರಾತತ್ವ ತಾಣದ ವೀಕ್ಷಣೆ ಮಾಡಿಸಲಾಯಿತು. ಈ ವೇಳೆ ಸಾವಿರಾರು ಸ್ಥಳೀಯ ಜನರು ಪ್ರವಾಸಿಗರಿಗೆ ಸಂಗೀತದೊಂದಿಗೆ ಸ್ವಾಗತ ಕೋರಿದರು.
ವಿಶ್ವದ ಅತಿದೊಡ್ಡ ಕ್ರೂಸ್ ಆಗಮಿಸುತ್ತಿರುವ ವಿಷಯ ತಿಳಿದ ಪ್ರಯಾಣಿಕರು ಅದನ್ನು ವೀಕ್ಷಿಸಲು ಜಮಾಯಿಸಿದ್ದರು. ಪ್ರವಾಸಿಗರು ಪುರಾತತ್ವ ತಾಣ ವೀಕ್ಷಣೆಯ ಬಳಿಕ ಚಿರಂದ್ ಘಾಟ್ ಮೂಲಕ ದೋಣಿ ಹಾದು ಹೋಯಿತಾದರೂ, ಇಲ್ಲಿ ತಂಗಲಿಲ್ಲ. ಇದರಿಂದ ಭವ್ಯವಾದ ನೌಕೆಯನ್ನು ನೋಡಲು ಬಂದಿದ್ದ ಜನರು ನಿರಾಸೆ ಅನುಭವಿಸಿದರು.
2 ತಿಂಗಳು 3 ಸಾವಿರ ಕಿಮೀ ಪ್ರಯಾಣ:ಈ ಭವ್ಯ ಮತ್ತು ದೊಡ್ಡ ವಿಹಾರ ನೌಕೆಯು 51 ದಿನಗಳ ಕಾಲ 3,200 ಕಿಲೋಮೀಟರ್‌ಗಳನ್ನು ಭಾರತದಿಂದ ಬಾಂಗ್ಲಾದೇಶದ 27 ನದಿಗಳ ಮೂಲಕ ಸುತ್ತ ಹಾಕಲಿದೆ. ಈ ಐಷಾರಾಮಿ ನೌಕೆಯು ಭಾರತವನ್ನು ವಿಶ್ವದ ನದಿ ವಿಹಾರ ನಕ್ಷೆಯಲ್ಲಿ ಉನ್ನತ ಎತ್ತರಕ್ಕೆ ಕೊಂಡೊಯ್ಯಲಿದೆ. ಜಲ ಮಾರ್ಗದುದ್ದಕ್ಕೂ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ.
ನೌಕೆಯಲ್ಲಿರುವ ಐಷಾರಾಮಿ ಸೌಲಭ್ಯಗಳು:ಈ ಐಷಾರಾಮಿ ರಿವರ್ ಕ್ರೂಸ್ ಅನ್ನು ಖಾಸಗಿ ಕಂಪನಿಗಳಾದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಮತ್ತು ಜೆಎಂ ಬ್ಯಾಕ್ಸಿ ರಿವರ್ ಕ್ರೂಸಸ್ ಜೊತೆಗೆ ಭಾರತದ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಎಐ) ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿ ನಿರ್ವಹಿಸಲಾಗುತ್ತದೆ. ಇದು ದೇಶದಲ್ಲಿಯೇ ನಿರ್ಮಿತವಾದ ಮೊದಲ ವಿಹಾರ ನೌಕೆ ಎಂಬ ಹೆಗ್ಗಳಿಕೆ ಹೊಂದಿದೆ. ನೌಕೆಯು 18 ಕ್ಯಾಬಿನ್‌ಗಳನ್ನು ಹೊಂದಿದೆ.
ಜಲಮಾರ್ಗದ ಯೋಜನೆ:ಸಕಲ ಸೌಲಭ್ಯಗಳೊಂದಿಗೆ 80 ಪ್ರಯಾಣಿಕರ ಸಾಮರ್ಥ್ಯದ ಐಷಾರಾಮಿ ನದಿ ನೌಕೆಯು ಕೋಲ್ಕತ್ತಾದ ಹೂಗ್ಲಿ ನದಿಯಿಂದ ವಾರಣಾಸಿಯ ಗಂಗಾ ನದಿಗೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಪ್ರಯಾಣಿಸಲಿದೆ. ಈ ಹಿಂದೆ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಗಂಗಾ ವಿಲಾಸ್ ಕ್ರೂಸ್ ವಾರಣಾಸಿಯಿಂದ ಪ್ರಯಾಣ ಆರಂಭಿಸಿ ಬಕ್ಸರ್, ರಾಮನಗರ, ಗಾಜಿಪುರ ಮಾರ್ಗವಾಗಿ 8ನೇ ದಿನ ಪಾಟ್ನಾ ತಲುಪಲಿದೆ.
ಪಾಟ್ನಾದಿಂದ ಕ್ರೂಸ್ ಕೋಲ್ಕತ್ತಾಗೆ ಹೊರಟು 20ನೇ ದಿನದಂದು ಫರಕ್ಕಾ ಮತ್ತು ಮುರ್ಷಿದಾಬಾದ್ ಮೂಲಕ ಪಶ್ಚಿಮ ಬಂಗಾಳದ ರಾಜಧಾನಿಯನ್ನು ತಲುಪುತ್ತದೆ. ಮರುದಿನ, ಅದು ಢಾಕಾಗೆ ಹೊರಟು ಬಾಂಗ್ಲಾದೇಶದ ಗಡಿಯನ್ನು ಪ್ರವೇಶಿಸುತ್ತದೆ. ಇದು ಮುಂದಿನ 15 ದಿನಗಳ ಕಾಲ ಬಾಂಗ್ಲಾದೇಶದಲ್ಲಿ ಉಳಿಯುತ್ತದೆ. ಅಂತಿಮವಾಗಿ, ಇದು ಸಿಬ್ಸಾಗರ್ ಮೂಲಕ ನೌಕಾಯಾನ ಮಾಡುವ ಮೊದಲು ಗುವಾಹಟಿ ಮೂಲಕ ಭಾರತಕ್ಕೆ ಹಿಂತಿರುಗುತ್ತದೆ.
ಐಷಾರಾಮಿ ನೌಕಾ ವಿಹಾರಕ್ಕೆ ಕಾಂಗ್ರೆಸ್ ಟೀಕೆ:ಅತಿ ದುಬಾರಿ ಮತ್ತು ಐಷಾರಾಮಿ ನೌಕಾ ವಿಹಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಇದು ಕೊಳಕಾಗಿರುವ ಗಂಗಾ ಶುದ್ಧವಾಗದೇ, ಅದರಲ್ಲಿರುವ ಡಾಲ್ಫಿನ್ಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಪ್ರಧಾನಿ ಅನಾವರಣಗೊಳಿಸಿದ ಗಂಗಾ ನದಿಯ ವಿಹಾರವು ತೀರಾ ಬಾಲಿಶವಾಗಿದೆ.
ಆಗರ್ಭ ಶ್ರೀಮಂತರನ್ನು ಹೊರತುಪಡಿಸಿ ಬೇರಾರೂ ಪ್ರವಾಸ ಮಾಡಲು ಸಾಧ್ಯವಿಲ್ಲ. ದೋಣಿಯಲ್ಲಿ ಒಂದು ರಾತ್ರಿ ಕಳೆಯಲು 50 ಲಕ್ಷ ಕಟ್ಟಲು ಸಾಧ್ಯವೇ? ಕೊಳಕಾಗಿರುವ ಗಂಗಾ ನದಿಯನ್ನು ಶುದ್ಧಿ ಮಾಡಲಾಗಿಲ್ಲ. ಇದರ ಮಧ್ಯೆ ದೋಣಿ ವಿಹಾರದಿಂದ ಅಪಾಯದಲ್ಲಿರುವ ರಾಷ್ಟ್ರೀಯ ಜಲಚರ ಸಸ್ತಿನಿ ಗಂಗಾ ಡಾಲ್ಫಿನ್ ನಾಶಕ್ಕೆ ಕಾರಣವಾಗುತ್ತದೆ' ಎಂದು ಹೇಳಿದ್ದಾರೆ.
ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಸ್ಪಷ್ಟನೆ:ಎಂವಿ ಗಂಗಾ ವಿಲಾಸ್ ಕ್ರೂಸ್ ನಿಗದಿಯಂತೆ ಪಾಟ್ನಾಗೆ ತೆರಳಿದೆ. ಅದು ಛಾಪ್ರಾದಲ್ಲಿ ಸಿಲುಕಿಕೊಂಡಿಲ್ಲ ಎಂದು ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ(ಐಡಬ್ಲ್ಯೂಎಐ) ಸ್ಪಷ್ಟನೆ ನೀಡಿದೆ. 'ನೌಕೆಯು ನಿಗದಿತ ವೇಳಾಪಟ್ಟಿಯಂತೆ ಮುಂದಿನ ಪ್ರಯಾಣ ಕೈಗೊಳ್ಳಲಿದೆ. ಛಾಪ್ರಾದಲ್ಲಿ ಹಡಗು ಸಿಲುಕಿಕೊಂಡಿದೆ ಎಂಬ ಸುದ್ದಿ ಸುಳ್ಳು' ಎಂದು ಐಡಬ್ಲ್ಯೂಎಐ ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ ಅವರನ್ನು ಉಲ್ಲೇಖಿಸಿ ಐಡಬ್ಲ್ಯೂಎಐ ಟ್ವೀಟ್ ಮಾಡಿದೆ. ಅಲ್ಲದೆ, ಸ್ಥಳೀಯ ಪತ್ರಕರ್ತರು ಈ ಬಗ್ಗೆ ತಪ್ಪಾಗಿ ಉಲ್ಲೇಖಿಸಿ ವರದಿ ಮಾಡಿದ್ದಾರೆ ಎಂದು ಛಾಪ್ರಾದ ಸಿಒ ಸತೇಂದ್ರ ಸಿಂಗ್ ಹೇಳಿದ್ದಾರೆ.
ಓದಿ:ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ