ಮುಂಬೈ (ಮಹಾರಾಷ್ಟ್ರ):ಮುಂಬೈನಲ್ಲಿ ಗಣೇಶ ಮೂರ್ತಿಗಳ ನಿಮಜ್ಜನಕ್ಕಾಗಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕೃತಕ ಕೊಳಗಳನ್ನು ನಿರ್ಮಾಣ ಮಾಡಿದೆ. ಮಾಲಿನ್ಯವನ್ನು ಕಡಿಮೆ ಮಾಡುವವಂತೆ ಜನರನ್ನು ಉತ್ತೇಜಿಸುವ ಕ್ರಮವಾಗಿ ಕೃತಕ ಹೊಂಡಗಳು ಅಥವಾ ಕೊಳಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ನಿಂದ ತಯಾರಿಸಿದ ಗಣೇಶನ ವಿಗ್ರಹಗಳನ್ನು ವಿಸರ್ಜಿಸುವಂತೆ ಬಿಎಂಸಿ ನಾಗರಿಕರನ್ನು ಕೇಳಿಕೊಂಡಿದೆ. ಮುಂಬೈನಲ್ಲಿ ಪ್ರಸ್ತುತ 162 ಕೃತಕ ಕೊಳಗಳು ಮತ್ತು 73 ನೈಸರ್ಗಿಕ ನಿಮಜ್ಜನ ಸ್ಥಳಗಳು ಲಭ್ಯವಿವೆ ಎಂದು ಬಿಎಂಸಿ ತಿಳಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ಸಹಾಯಕ ಆಯುಕ್ತ ರಮಾಕಾಂತ ಬಿರಾದಾರ್, 162 ಕೃತಕ ಕೊಳಗಳು, 73 ನೈಸರ್ಗಿಕ ನಿಮಜ್ಜನ ಸ್ಥಳಗಳಿವೆ. ಈ ಎಲ್ಲ ಸ್ಥಳಗಳಲ್ಲಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಗಣೇಶ ಚತುರ್ಥಿ ಆಗಸ್ಟ್ 31 ರಂದು ಪ್ರಾರಂಭವಾಗಿದ್ದು, ಹತ್ತು ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 9 ರಂದು ಗಣಪನ ನಿಮಜ್ಜನದೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ ಎಂದರು.