ನವದೆಹಲಿ:ದೇಶದ ಆರ್ಥಿಕ ಏಳಿಗೆಗಾಗಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
'ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ಚಿತ್ರ ಇರಬೇಕು ಎಂಬುದು 130 ಕೋಟಿ ಭಾರತೀಯರ ಆಶಯವಾಗಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ದೇಶದ ಆರ್ಥಿಕತೆಯು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಂದಿಗೂ ನಮ್ಮ ದೇಶದಲ್ಲಿ ತುಂಬಾ ಬಡವರಿದ್ದಾರೆ ಏಕೆ? ಎಂದು ಸಿಎಂ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಒಂದೆಡೆ ನಾಗರಿಕರೆಲ್ಲರೂ ಕಷ್ಟಪಟ್ಟು ದುಡಿಯಬೇಕು ಮತ್ತು ಇನ್ನೊಂದೆಡೆ ದೇವರ ಆಶೀರ್ವಾದವೂ ಬೇಕು. ಹಾಗಾದರೆ ಮಾತ್ರ ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಸರಿಯಾದ ನೀತಿ, ಕಠಿಣ ಪರಿಶ್ರಮ ಮತ್ತು ದೇವರ ಆಶೀರ್ವಾದಗಳ ಸಂಗಮದಿಂದ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ಸಾರ್ವಜನಿಕವಾಗಿಯೂ ಇದೇ ವಿಚಾರವನ್ನು ಒತ್ತಾಯಿಸಿದ್ದೇನೆ ಎಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಅಂದಿನಿಂದ, ಈ ವಿಷಯದ ಬಗ್ಗೆ ಸಾರ್ವಜನಿಕರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಅದರ ಬಗ್ಗೆ ಜನರಲ್ಲಿ ಅಪಾರ ಉತ್ಸಾಹವಿದೆ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಎಲ್ಲರೂ ಬಯಸುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ಅವರ ಈ ಬೇಡಿಕೆಗೆ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯ "ಕೊಳಕು ಹಿಂದೂ ವಿರೋಧಿ ಮುಖ"ವನ್ನು ಮರೆಮಾಚುವ ವಿಫಲ ಪ್ರಯತ್ನ ಎಂದು ಟೀಕಿಸಿದೆ.
ಇದನ್ನೂ ಓದಿ:ಕಾನೂನು ಸುವ್ಯವಸ್ಥೆ ಸುಧಾರಣೆಗೆ ತಂತ್ರಜ್ಞಾನ ಬಳಕೆಗೆ ಪ್ರಧಾನಿ ಮೋದಿ ಒತ್ತು