ಶ್ರೀನಗರ: ಅಂತಿಮ ಘಟ್ಟದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಜನಿ ಪಾಟೀಲ್ ಮಾಹಿತಿ ನೀಡಿದ್ದಾರೆ. ರಾಹುಲ್ ಗಾಂಧಿ ಜನವರಿ ಮೂರನೇ ವಾರದಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ತಲುಪಲಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಮುಂದಿನ ತಿಂಗಳು ಜಮ್ಮು ಕಾಶ್ಮೀರಕ್ಕೆ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆ ಅವರು ಮಾಹಿತಿ ನೀಡಿದರು. ಭಾರತ್ ಜೋಡೊ ಯಾತ್ರೆಯು ರಾಜಕೀಯ ಪ್ರೇರಿತವಾಗಿಲ್ಲ ಮತ್ತು ದೇಶದ ಒಳಿತಿಗಾಗಿ ಜನರನ್ನು ಒಗ್ಗೂಡಿಸಲು ನಡೆಸುತ್ತಿರುವ ಯಾತ್ರೆಗಾಗಿ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗುವಂತೆ ಅವರು ರಾಜಕೀಯ ನಾಯಕರಿಗೆ ಮನವಿ ಮಾಡಿದರು.