ಕರ್ನಾಟಕ

karnataka

Gandhi Peace Prize: ಶತಮಾನ ಪೂರೈಸಿದ ಗೀತಾ ಪ್ರೆಸ್​ಗೆ 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ

By

Published : Jun 18, 2023, 9:35 PM IST

ನೂರು ವರ್ಷ ಪೂರೈಸಿದ ಗೋರಖ್‌ಪುರದ ಗೀತಾ ಪ್ರೆಸ್​ಗೆ 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ನೀಡಲಾಗಿದೆ. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಗೀತಾ ಪ್ರೆಸ್​ ಪ್ರಕಟಿಸಿದೆ.

Gandhi Peace Prize for 2021 to be conferred on Gita Press Gorakhpur
Gandhi Peace Prize: ನೂರು ವರ್ಷ ಪೂರೈಸಿದ ಗೀತಾ ಪ್ರೆಸ್​ಗೆ 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ

ನವದೆಹಲಿ: 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೋರಖ್‌ಪುರದ ಗೀತಾ ಪ್ರೆಸ್‌ಗೆ ಭಾಜನವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಭಾನುವಾರ ತಿಳಿಸಿದೆ. ಅಹಿಂಸಾತ್ಮಕ ಮತ್ತು ಇತರ ಗಾಂಧಿವಾದಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅದರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗಾಂಧಿ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಮಹಾತ್ಮ ಗಾಂಧಿಯವರ 125ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವವಾಗಿ 1995ರಲ್ಲಿ ಕೇಂದ್ರ ಸರ್ಕಾರವು ವಾರ್ಷಿಕ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲ ವ್ಯಕ್ತಿಗಳಿಗೆ ನೀಡಲಾಗುತ್ತದೆ. 1 ಕೋಟಿ ರೂಪಾಯಿ ನಗದು ಮೊತ್ತ, ಪ್ರಶಸ್ತಿಪತ್ರ, ಫಲಕ ಮತ್ತು ಸಾಂಪ್ರದಾಯಿಕ ಕರಕುಶಲ ಹಾಗೂ ಕೈಮಗ್ಗದ ವಸ್ತುವನ್ನು ಪ್ರಶಸ್ತಿ ಒಳಗೊಂಡಿದೆ.

ಪ್ರಧಾನಿ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಜೂನ್ 18ರಂದು ಚರ್ಚೆ ನಡೆಸಿದ ನಂತರ ಗೋರಖ್‌ಪುರದ ಗೀತಾ ಪ್ರೆಸ್​ಅನ್ನು 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ. 1923ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾಗಿದೆ. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಥೆಯು ಆದಾಯಕ್ಕಾಗಿ ತನ್ನ ಜಾಹೀರಾತನ್ನು ಎಂದಿಗೂ ಅವಲಂಬಿಸಿಲ್ಲ. ಗೀತಾ ಪ್ರೆಸ್ ತನ್ನ ಅಂಗಸಂಸ್ಥೆಗಳೊಂದಿಗೆ ಜೀವನದ ಉನ್ನತಿಗಾಗಿ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತದೆ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿ ಆದರ್ಶಗಳನ್ನು ಪ್ರಚಾರ ಮಾಡುವಲ್ಲಿ ಗೀತಾ ಪ್ರೆಸ್ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

ಗೀತಾ ಮುದ್ರಣಾಲಯ ಸ್ಥಾಪನೆಯಾಗಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ ಮಾಡಿರುವುದು ಸಂಸ್ಥೆಯು ಸಮಾಜ ಸೇವೆಯಲ್ಲಿ ಮಾಡಿರುವ ಕಾರ್ಯವನ್ನು ಗುರುತಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಶಾಂತಿ ಪ್ರಶಸ್ತಿ - 2021 ಮಾನವೀಯತೆಯ ಸಾಮೂಹಿಕ ಉನ್ನತಿಗೆ ಕೊಡುಗೆ ನೀಡುವಲ್ಲಿ ಗೀತಾ ಪ್ರೆಸ್‌ನ ಪ್ರಮುಖ ಮತ್ತು ಸಾಟಿಯಿಲ್ಲದ ಕೊಡುಗೆಯನ್ನು ಗುರುತಿಸುತ್ತದೆ. ಇದು ಗಾಂಧಿವಾದಿ ಜೀವನವನ್ನು ನಿಜವಾದ ಅರ್ಥದಲ್ಲಿ ನಿರೂಪಿಸುತ್ತದೆ ಎಂದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಕೂಡ ಮಾಡಿದ್ದು, 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಗೋರಖ್‌ಪುರದ ಗೀತಾ ಪ್ರೆಸ್​ಅನ್ನು ನಾನು ಅಭಿನಂದಿಸುತ್ತೇನೆ. ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಈ ಹಿಂದಿನ ಪ್ರಮುಖ ಪ್ರಶಸ್ತಿ ಪುರಸ್ಕೃತರು: ಗಾಂಧಿ ಶಾಂತಿ ಪ್ರಶಸ್ತಿಗೆ ಈ ಹಿಂದೆ ದೇಶ- ವಿದೇಶಿಯರು ಅನೇಕರು ಭಾಜನರಾಗಿದ್ದಾರೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ, ರಾಮಕೃಷ್ಣ ಮಿಷನ್, ಗ್ರಾಮೀಣ ಬ್ಯಾಂಕ್ ಆಫ್ ಬಾಂಗ್ಲಾದೇಶ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಬೆಂಗಳೂರಿನ ಅಕ್ಷಯ ಪಾತ್ರೆ, ಏಕಲ್ ಅಭಿಯಾನ್ ಟ್ರಸ್ಟ್, ಸುಲಭ್ ಇಂಟರ್‌ನ್ಯಾಶನಲ್ ಮುಂತಾದ ಸಂಸ್ಥೆಗಳು ಸಹ ಸೇರಿವೆ.

ಅಲ್ಲದೇ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಡಾ.ನೆಲ್ಸನ್ ಮಂಡೇಲಾ ತಾಂಜಾನಿಯಾದ ಮಾಜಿ ಅಧ್ಯಕ್ಷ ಡಾ ಜೂಲಿಯಸ್ ನೈರೆರೆ, ಶ್ರೀಲಂಕಾದ ಸರ್ವೋದಯ ಶ್ರಮದಾನ ಚಳವಳಿಯ ಸಂಸ್ಥಾಪಕ ಅಧ್ಯಕ್ಷ ಡಾ.ಎ.ಟಿ. ಅರಿಯರತ್ನೆ, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಡಾ. ಗೆರ್ಹಾರ್ಡ್ ಫಿಶರ್ ಅವರಂತಹ ಗಣ್ಯರಿಗೆ ನೀಡಲಾಗಿದೆ. ಇತ್ತೀಚಿನ ಪ್ರಶಸ್ತಿ ಪುರಸ್ಕೃತರಲ್ಲಿ ಒಮಾನ್​ನ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ (2019) ಮತ್ತು ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ (2020) ಸೇರಿದ್ದಾರೆ.

ಇದನ್ನೂ ಓದಿ:Adipurush ವಿವಾದ: ಜನರ ಭಾವನೆಗಳಿಗೆ ಧಕ್ಕೆ.. ಛತ್ತೀಸ್‌ಗಢದಲ್ಲಿ ಚಿತ್ರ ನಿಷೇಧಿಸುವ ಭರವಸೆಯಿದೆ ಎಂದ ಕೇಂದ್ರ ಸಚಿವೆ

ABOUT THE AUTHOR

...view details