ಹೈದರಾಬಾದ್: ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮೋಹನ್ದಾಸ ಕರಮಚಂದ್ ಗಾಂಧಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅಹಿಂಸಾತ್ಮಕವಾಗಿ ಹೋರಾಟ ಮಾಡಿ ಒಂದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಸಂತ. ಅವರ ಈ ಹೋರಾಟ ಜನಮಾನಸದಲ್ಲಿ ಎಂದೂ ಅಳಿಸಲಾಗದ ಒಂದು ಹೆಜ್ಜೆ ಗುರುತು.
ಮಹಾತ್ಮ ಗಾಂಧಿ ಅಥವಾ ಬಾಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಭಾರತದ ಪ್ರಮುಖ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕ. ಅಸಹಕಾರ ಚಳವಳಿ, ದಂಡಿ ಮಾರ್ಚ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಂತಹ ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದು ಇದೇ ಬಾಪುಜಿ. ತಮ್ಮ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಮಹಾತ್ಮ ಗಾಂಧಿ ಅವರು ದೇಶದ ಮೂಲೆ ಮೂಲೆಯಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು.
ಸತ್ಯಾಗ್ರಹ (ಸತ್ಯ-ಬಲ) ಮತ್ತು ಅಹಿಂಸೆಯಂತಹ ಗಾಂಧಿ ಅವರ ಕಾರ್ಯತಂತ್ರಗಳು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಭಾರಿ ಪರಿಣಾಮ ಬೀರಿದವು. 1917 ರಲ್ಲಿ ಚಂಪಾರಣ್ ಸತ್ಯಾಗ್ರಹದಿಂದ ಪ್ರಾರಂಭವಾಗಿ 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯವರೆಗೆ, ಅವರು ರಾಷ್ಟ್ರದಾದ್ಯಂತ ಸ್ವಾತಂತ್ರ್ಯಕ್ಕಾಗಿ ತನ್ನ ಹೋರಾಟದ ಕಿಚ್ಚನ್ನು ಹೊತ್ತಿಸಿದರು, ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು.
ಮಹಾತ್ಮಾ ಗಾಂಧಿ ಮತ್ತು ಕುಟುಂಬ: ಗಾಂಧೀಜಿ ಅವರ ತಂದೆ ಕರಮಚಂದ್ ಗಾಂಧಿ, ಬ್ರಿಟಿಷ್ ಇಂಡಿಯಾದ ಪೋರಬಂದರ್ ರಾಜ್ಯದ ದಿವಾನ್ ಆಗಿದ್ದರು. ಅವರ ತಾಯಿ ಪುಥಲಿಬಾಯಿ, ಕರಮಚಂದ್ ಅವರ ನಾಲ್ಕನೇ ಪತ್ನಿ. ಹಿಂದೂ ಕುಟುಂಬದಲ್ಲಿ ಜನಿಸಿದ ಗಾಂಧೀಜಿ ಅವರು, ಸ್ವಯಂ ಶುದ್ಧೀಕರಣದ ಸಾಧನವಾಗಿ ಸಸ್ಯಾಹಾರ ಮತ್ತು ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರು. 13 ನೇ ವಯಸ್ಸಿನಲ್ಲಿ, ಅವರು ಕಸ್ತೂರಬಾ ಅವರನ್ನು ವಿವಾಹವಾದರು. 1885 ರಲ್ಲಿ, ಕಸ್ತೂರಬಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು, ದಂಪತಿಗೆ ನಾಲ್ಕು ಗಂಡು ಮಕ್ಕಳಿದ್ದರು. ಇನ್ನು ಮಹಾತ್ಮಾಗಾಂಧಿ ತಮ್ಮ ಶಾಲಾ ದಿನಗಳಲ್ಲಿ ಒಬ್ಬ ಸಾಧಾರಣ ವಿದ್ಯಾರ್ಥಿ ಆಗಿದ್ದರು. ಗುಜರಾತ್‌ನ ಸಮಲ್ದಾಸ್ ಕಾಲೇಜಿನಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಮೂರನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಸೆಪ್ಟೆಂಬರ್ 4, 1888ರಲ್ಲಿ ಅವರು ಬಾರಿಸ್ಟರ್ ಓದಲು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದರು. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಅವರು ಕಾನೂನು ಅಧ್ಯಯನ ನಡೆಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಪಾತ್ರ
ಚಂಪಾರಣ್ ಸತ್ಯಾಗ್ರಹ (1917):1917 ರ ಚಂಪಾರಣ್ ಸತ್ಯಾಗ್ರಹವು ಭಾರತದಲ್ಲಿ ಗಾಂಧಿ ನೇತೃತ್ವದ ಮೊದಲ ಸತ್ಯಾಗ್ರಹ ಚಳವಳಿಯಾಗಿದೆ. ಇದನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಐತಿಹಾಸಿಕವಾಗಿ ಮಹತ್ವದ ದಂಗೆ ಎಂದು ಪರಿಗಣಿಸಲಾಗಿದೆ. ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಡೆದ ರೈತ ದಂಗೆಯಾಗಿದೆ. ಇಂಡಿಗೋ ಬೆಳೆಗೆ ತೆರಿಗೆ ಪಾವತಿಸದೇ ಬ್ರಿಟಿಷ್ ಸರ್ಕಾರದ ವಿರುದ್ಧ ರೈತರು ಮಾಡಿದ ಪ್ರತಿಭಟನೆ ಇದಾಗಿತ್ತು. ಗಾಂಧೀಜಿ ಅವರು 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದಾಗ ಮತ್ತು ಉತ್ತರ ಭಾರತದ ರೈತರು ಇಂಡಿಗೋ ಪ್ಲಾಂಟರ್ಸ್‌ನಿಂದ ತುಳಿತಕ್ಕೊಳಗಾದುದನ್ನು ಕಂಡರು. ಈ ಅನ್ಯಾಯದ ವಿರುದ್ಧ ಅವರು ಶಾಂತಿಯುತ ಪ್ರತಿಭಟನೆಯ ಅಸ್ತ್ರ ಬಳಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಅವರು ಅನುಸರಿಸಿದ್ದ ಹೋರಾಟದ ತಂತ್ರಗಳನ್ನೇ ಇಲ್ಲಿ ಬಳಸಿದರು.