ಹೈದರಾಬಾದ್:ನಗರದಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಗಿದ್ದು, ಇಂದು ನಿಮಜ್ಜನ ಮೆರವಣಿಗೆಯೂ ವಿಜೃಂಭಣೆಯಿಂದ ನಡೆಯುತ್ತಿದೆ. ಮತ್ತೊಂದೆಡೆ 9 ದಿನಗಳ ಕಾಲ ಪೂಜೆ ಸಲ್ಲಿಸಿ ಗಣಪನಿಗೆ ಅರ್ಪಿಸಲಾಗಿರುವ ಲಡ್ಡು ಹರಾಜು ಕೂಡ ಮಾಡಲಾಗುತ್ತಿದೆ. ಲಡ್ಡು ಪ್ರಸಾದ ಪಡೆಯಲು ಭಕ್ತರು ಪೈಪೋಟಿ ನಡೆಸುತ್ತಿದ್ದಾರೆ. ಇದೀಗಾ ಹೈದರಾಬಾದ್ನ ಬಂಡ್ಲಗೂಡ ಗಣಪನ ಲಡ್ಡು ದಾಖಲೆಯ ಬೆಲೆಗೆ ಹರಾಜಾಗಿದೆ. ಬರೋಬ್ಬರಿ 1.20 ಕೋಟಿ ರೂಗೆ ಕೀರ್ತಿ ರಿಚ್ಮಂಡ್ ವಿಲ್ಲಾ ಕಮ್ಯೂನಿಟಿ ಗ್ರೂಪ್ ಈ ಲಡ್ಡುವನ್ನು ಪಡೆದುಕೊಂಡಿದೆ. ಕಳೆದ ವರ್ಷ ಇದೇ ಗಣಪನ ಲಡ್ಡು 60.80 ಲಕ್ಷ ರೂಗೆ ಬಿಕರಿಯಾಗಿತ್ತು. ಈ ಬಾರಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವುದು ವಿಶೇಷ. 2021ರಲ್ಲಿ 41 ಲಕ್ಷ ರೂ ಗೆ ಲಡ್ಡು ಹರಾಜುಗೊಂಡಿತ್ತು.
ಬಾಲಾಪೂರ್ ಗಣೇಶ ಲಡ್ಡು ಹರಾಜು:ಹೈದರಾಬಾದ್ನ ಸುಪ್ರಸಿದ್ದ ಬಾಲಾಪೂರ್ ಗಣಪತಿಯ ಲಡ್ಡು ಕೂಡ ಹರಾಜುಗೊಂಡಿದೆ. ದಾಸರಿ ದಯಾನಂದರೆಡ್ಡಿ ಎಂಬುವರು ಈ ಲಡ್ಡುವನ್ನು ಪಡೆದುಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಲಡ್ಡು ಹರಾಜು ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಉದ್ಯಮಿಗಳು ಸೇರಿದಂತೆ ಹಲವಾರು ಜನ ಈ ಹರಾಜು ಪ್ರಕ್ರಿಯೆಯಲ್ಲಿ ಹಾಜರಿದ್ದರು. ಈ ವರ್ಷ 27 ಲಕ್ಷ ರೂಗೆ ಲಡ್ಡು ಬಿಕರಿಯಾಗಿದೆ.
ಹೈದರಾಬಾದ್ನಲ್ಲಿ ಖೈರತಾಬಾದ್ ಗಣೇಶನ ಬಳಿಕ ಬಾಲಾಪೂರ್ ಗಣೇಶ ಲಡ್ಡು ಹರಾಜು ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿನ ಲಂಬೋದರನ ಕೈಯಲ್ಲಿರುವ ಲಡ್ಡು ಪಡೆದವರಿಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿಯೇ ಭಕ್ತರು ಈ ಲಡ್ಡು ಪಡೆಯಲು ಭಾರಿ ಸಂಖೆಯಲ್ಲಿ ಹರಾಜು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಕಳೆದ 28 ವರ್ಷಗಳಿಂದ ಪ್ರತಿವರ್ಷ ಬಾಲಾಫೂರ್ ಗಣಪನ ಲಡ್ಡು ಹರಾಜು ಕಾರ್ಯಕ್ರಮ ನಡೆಯುತ್ತ ಬಂದಿದೆ. 1994ರಲ್ಲಿ ಮೊದಲ ಬಾರಿಗೆ ಬಾಲಾಪೂರ್ ಗಣೇಶ ಲಡ್ಡು 450 ರೂಪಾಯಿಗೆ ಹರಾಜಾಗಿತ್ತು. ಕಳೆದ ವರ್ಷ ವಂಗೇಟಿ ಲಕ್ಷ್ಮರೆಡ್ಡಿ ಎಂಬುವವರು 24.60 ಲಕ್ಷ ರೂ ನೀಡಿ ಲಡ್ಡುವನ್ನು ಪಡೆದಿದ್ದರು. ಪ್ರತಿ ವರ್ಷ ಬಾಲಾಪೂರ ಗಣಪನ ಲಡ್ಡು ಹಾರಾಜು ಬೆಲೆ ಏರಿಕೆಯಾಗುತ್ತಲೆ ಸಾಗುತ್ತಿದೆ. 2001ರವರೆಗೆ ಈ ಲಡ್ಡು ಸಾವಿರ ರೂಗಳಲ್ಲಿ ಮಾರಾಟವಾಗುತ್ತಿತ್ತು. ಆ ಬಳಿಕ ಲಕ್ಷ ರೂಗಳಲ್ಲಿ ಹರಾಜಾಗುತ್ತಿದೆ.
2002ರಲ್ಲಿ ಕಂದಡ ಮಾದವ ರೆಡ್ಡಿ ಎಂಬುವವರು 1,05,000 ರೂ.ಗೆ ಲಡ್ಡು ಪಡೆದಿದ್ದರು. ಅಂದಿನಿಂದ ಪ್ರತಿ ವರ್ಷ ಒಂದು ಲಕ್ಷದಷ್ಟು ಏರಿಕೆ ಆಗುತ್ತಲೇ ಸಾಗುತ್ತಿದೆ. 2007ರಲ್ಲಿ ರಘುನಂದನಾಚಾರಿ ಎಂಬುವವರು 4,15,000 ರೂ.ಗೆ ಲಡ್ಡು ಖರೀದಿಸಿದ್ದರು. 2015ರಲ್ಲಿ ಬಾಲಪೂರ ಲಡ್ಡು 10 ಲಕ್ಷ ರೂ ದಾಟಿ ದಾಖಲೆ ಸೃಷ್ಟಿಸಿತ್ತು. 2016ರಲ್ಲಿ ನಾಲ್ಕು ಲಕ್ಷ ಹೆಚ್ಚಾಗಿದ್ದು, ಕಲ್ಲೆಂ ಮದನ್ ಮೋಹನ್ ರೆಡ್ಡಿ ಅವರು 10,32,000 ರೂ.ಗೆ ಲಡ್ಡುವನ್ನ ಪಡೆದಿದ್ದರು.
ಇದನ್ನೂ ಓದಿ:ಹಿಂದೂ ಮಹಾಮಂಡಳದ ಗಣೇಶನ ನಿಮಜ್ಜನ ಮೆರವಣಿಗೆಗೆ ಸಜ್ಜಾದ ಶಿವಮೊಗ್ಗ: ಕೇಸರಿಮಯವಾದ ನಗರದಲ್ಲಿ ಗಮನ ಸೆಳೆಯುತ್ತಿರುವ ಉಗ್ರನರಸಿಂಹ