ನವದೆಹಲಿ : ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾದ ಭಾರತದ ನಿರ್ಧಾರ ಇಂಡೋ-ಚೀನಾ ಗಡಿ ಸಂರ್ಘಷದಲ್ಲಿ ಗೇಮ್ ಚೇಂಜರ್ ಆಗಿ ಪರಿಣಮಿಸಿದ್ದು, ಇದರ ಪರಿಣಾಮ ಎರಡೂ ಸೇನೆಗಳು ಗಡಿಯಿಂದ ಹಿಂದೆ ಸರಿದಿವೆ.
ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಸೇರಿದಂತೆ ಮಿಲಿಟರಿ ಕಮಾಂಡರ್‌ಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರ ಪ್ರದೇಶವನ್ನು ವಶಪಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.
ಆಗಸ್ಟ್ 29 ರಿಂದ 30 ರವರೆಗೆ ನಡೆಸಿದ ತ್ವರಿತ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ರೆಜಾಂಗ್ ಲಾ, ರಿಚೆನ್ ಲಾ ಮತ್ತು ಮೊಖ್ಪಾರಿ ಸೇರಿದಂತೆ ಚೀನಾದ ವಶದಲ್ಲಿದ್ದ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಮಿಲಿಟರಿ ಕಮಾಂಡರ್‌ಗಳನ್ನು ಒಳಗೊಂಡ ಈ ಸಭೆಯಲ್ಲಿ ಟಿಬೆಟಿಯನ್ನರು ಸೇರಿದಂತೆ ವಿಶೇಷ ಗಡಿ ಪ್ರದೇಶದ ಪಡೆಗಳನ್ನು ಕಾರ್ಯಾಚರಣೆಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿತ್ತು.