ನವದೆಹಲಿ:ಹಿಂದಿ ದೈನಿಕ ಪಂಜಾಬ್ ಕೇಸರಿ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು 2 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮನ್ನು 'ಪುರಾಣದಲ್ಲಿನ ರಾಕ್ಷಸ ಪಾತ್ರವಾಗಿರುವ ಭಸ್ಮಾಸುರನಿಗೆ ಹೋಲಿಸಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.
ಈ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರ ಮುಂದೆ ಇಂದು(ಬುಧವಾರ) ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಗಂಭೀರ್ ಅವರು ಪಂಜಾಬ್ ಕೇಸರಿ ಪತ್ರಿಕೆ ಸಂಪಾದಕ ಆದಿತ್ಯ ಚೋಪ್ರಾ ಮತ್ತು ವರದಿಗಾರ ಅಮಿತ್ ಕುಮಾರ್ ಮತ್ತು ಇಮ್ರಾನ್ ಖಾನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. "ತಮ್ಮನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಲೇಖನಗಳ ಸರಣಿ ಪ್ರಕಟಿಸಿರುವ ಈ ಮೂವರು ತಮ್ಮ ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ" ಎಂದು ದೂರಿದ್ದಾರೆ.
ದೂರಿನ ಸಂಪೂರ್ಣ ವಿವರ:ವಕೀಲ ಜೈ ಅನಂತ್ ದೇಹದ್ರಾಯ್ ಅವರ ಮೂಲಕ ಗಂಭೀರ್ ಮೊಕದ್ದಮೆ ಹೂಡಿದ್ದಾರೆ. ಪತ್ರಿಕೆಯು ತನ್ನ ಕಥೆಗಳಿಗೆ ಅನಗತ್ಯ ತಿರುವು ನೀಡಿದೆ ಎಂದು ಉಲ್ಲೇಖಿಸಿದ್ದಾರೆ. ಪೂರಕವಾಗಿ ಹಲವಾರು ವರದಿಗಳನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ. ಒಂದು ವರದಿಯು, ಮೊಕದ್ದಮೆಯಲ್ಲಿ ವಾದಿಸಿದಂತೆ "ನನ್ನನ್ನು ಪೌರಾಣಿಕ ರಾಕ್ಷಸ "ಭಸ್ಮಾಸುರ" ಎಂದು ಕರೆಯುವ ಮೂಲಕ ಅವಮಾನ ಮಾಡಿದೆ. ವರದಿಗಳು ಕಾರ್ಯಕ್ಷಮತೆ ಮತ್ತು ಸಮಗ್ರತೆಯ ಬಗ್ಗೆ ಕಟ್ಟುಕಥೆ ಮತ್ತು ಹೆಚ್ಚು ಹಾನಿಕರ ನಿರೂಪಣೆ ಮಾಡಿವೆ. ಇದು ಓದುಗರನ್ನು ದಾರಿ ತಪ್ಪಿಸುತ್ತವೆ. ತನ್ನ ಖ್ಯಾತಿಗೆ ಕಳಂಕ ತರುತ್ತವೆ" ಎಂದು ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ತನ್ನನ್ನು ಜಾತಿವಾದಿ ನಂಬಿಕೆಗಳಿರುವ ವ್ಯಕ್ತಿ ಮತ್ತು ಸೊಕ್ಕಿನ ರಾಜಕಾರಣಿ ಎಂದು ಬಿಂಬಿಸಲಾಗಿದೆ ಎಂದು ಟೀಕಿಸಲಾಗಿದೆ. ಪ್ರತಿವಾದಿಗಳು ತಮ್ಮ ಪ್ರಕಟಣೆಯ ಸತ್ಯಾಸತ್ಯತೆಯನ್ನು ದೃಢೀಕರಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಇದು ನನ್ನನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡ ಅವರ ಸಾಮೂಹಿಕ ಪ್ರಯತ್ನವನ್ನು ತೋರಿಸುತ್ತದೆ" ಎಂದು ಹೇಳಿದ್ದಾರೆ.