ರೇವಾ(ಮಧ್ಯಪ್ರದೇಶ): 'ವೀರ ಚಕ್ರ ಪ್ರಶಸ್ತಿ' ಪುರಸ್ಕೃತ ಹುತಾತ್ಮ ಯೋಧ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪತಿಯ ಕನಸನ್ನು ನನಸಾಗಿಸಿದ್ದಾರೆ. ವೈದ್ಯಕೀಯ ನೇಮಕಾತಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅವರಿಗೆ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ.
ಮದುವೆಯಾದ ಕೇವಲ 15 ತಿಂಗಳಲ್ಲೇ ರೇಖಾ ಸಿಂಗ್ ಪತಿಯನ್ನು ಕಳೆದುಕೊಂಡಿದ್ದರು. ವಿವಾಹಕ್ಕೂ ಮುನ್ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದರು. ಉನ್ನತ ಶಿಕ್ಷಣ ಪಡೆದಿರುವ ರೇಖಾ ಅವರಿಗೆ ಶಿಕ್ಷಕಿಯಾಗುವ ಮೂಲಕ ಸಮಾಜಸೇವೆ ಮಾಡುವ ಕನಸಿತ್ತು. ಆದರೆ 2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ದೀಪಕ್ ಸಿಂಗ್ ವೀರಮರಣವನ್ನಪ್ಪಿದರು. ಹುತಾತ್ಮ ಪತಿಯ ದುಃಖ ಹಾಗೂ ದೇಶಭಕ್ತಿಯಿಂದ ಶಿಕ್ಷಕಿ ಹುದ್ದೆ ತೊರೆದು ಸೇನೆಯಲ್ಲಿ ಅಧಿಕಾರಿಯಾಗಲು ನಿರ್ಧರಿಸಿದ್ದೇನೆ ಎಂದು ರೇಖಾ ಸಿಂಗ್ ತಿಳಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಹಾದಿ ಸುಲಭವಾಗಿರಲಿಲ್ಲ. ಇದಕ್ಕಾಗಿ ನೋಯ್ಡಾಗೆ ತೆರಳಿ ಸೇನೆಗೆ ಸೇರಲು ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿ ತರಬೇತಿ ಪಡೆದರು. ದೈಹಿಕ ತರಬೇತಿಯನ್ನೂ ತೆಗೆದುಕೊಂಡರು. ಇಷ್ಟೆಲ್ಲಾ ಆದರೂ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಧೈರ್ಯ ಕಳೆದುಕೊಳ್ಳದೆ ಸೇನೆ ಸೇರಲು ಸಂಪೂರ್ಣ ತಯಾರಿ ನಡೆಸುತ್ತಿದ್ದೆ. ಎರಡನೇ ಪ್ರಯತ್ನದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದೇನೆ.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಯ ತರಬೇತಿಯು ಮೇ 28 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ತರಬೇತಿ ಪೂರ್ಣಗೊಂಡ ನಂತರ, ಒಂದು ವರ್ಷದಲ್ಲಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಬೇಕಾಗುತ್ತದೆ. ಮುಂದೆ ನನ್ನ ಪತಿಯ ಕನಸನ್ನು ನನಸು ಮಾಡಲು ಮತ್ತು ಸಹೋದರಿಯರಿಗೆ ಸರಿದಾರಿ ತೋರಿಸಲು ಸೇನೆಗೆ ಬಂದಿದ್ದೇನೆ ಎಂದು ರೇಖಾ ಸಿಂಗ್ ಹೇಳಿದರು.
ಇದನ್ನೂ ಓದಿ:ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಪ್ರತಿಮೆ ಅನಾವರಣ