ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ನಡುವಿನ ಘರ್ಷಣೆಯಲ್ಲಿ ಎರಡೂ ದೇಶಗಳ ಕಡೆ ಸಾಕಷ್ಟು ಸಾವು ನೋವು ಸಂಭವಿಸಿದ್ರೂ ಇದರಿಂದ ಹೆಚ್ಚು ಹೊಡೆತ ಬಿದ್ದಿರೋದು ಮಾತ್ರ ಚೀನಾಗೆ.
ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಗಲ್ವಾನ್ ಘರ್ಷಣೆಯ ಬಳಿಕ ಕಳೆದೊಂದು ವರ್ಷದಲ್ಲಿ ಭಾರತದ ಶೇಕಡಾ 43 ರಷ್ಟು ಗ್ರಾಹಕರು ಚೀನಾದ ವಸ್ತುಗಳ ಖರೀದಿಸಿಲ್ಲ ಎಂದು ಸಮೀಕ್ಷೆಯ ವರದಿಯೊಂದು ಬಹಿರಂಗವಾಗಿದೆ.
ನೋಯ್ಡಾ ಮೂಲದ ಆನ್‌ಲೈನ್ ಸಂಸ್ಥೆ ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಸಮೀಕ್ಷೆಗೆ 281 ಜಿಲ್ಲೆಗಳಿಂದ 18,000 ಮಂದಿಯ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿತ್ತು. ಶೇಕಡಾ 60 ರಷ್ಟು ಮಂದಿ 1 ಅಥವಾ 2 ಬಾರಿ ಚೀನಾ ವಸ್ತುಗಳನ್ನು ಖರೀದಿಸಿದ್ದಾರಂತೆ.
ಎಲೆಕ್ಟ್ರಾನಿಕ್ ವಸ್ತುಗಳು, ಔಷಧಿ ಸಂಬಂಧಿತ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಚೀನಾ ಭಾರತದ ಮಾರುಕಟ್ಟೆಯನ್ನೇ ಅವಲಂಭಿಸಿದೆ. ಗಲ್ವಾನ್ ಕಣಿವೆಯಲ್ಲಿ ಭಾರತದ ಯೋಧರ ಮೇಲೆ ಚೀನಾ ಸೈನಿಕರು ದಾಳಿ ಮಾಡಿದ ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಚೀನಿ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿತ್ತು. ಇದು ಚೀನಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.
ಕೇಂದ್ರ ಸರ್ಕಾರ ಕೂಡ ಡ್ರ್ಯಾಗನ್ ದೇಶದ ವಿರುದ್ಧ ಸಮರ ಸಾರಿತ್ತು. ಭಾರತದ ಅತ್ಯಂತ ಸೂಕ್ಷ್ಮ ಮಾಹಿತಿಯ ದುರ್ಬಳಕೆಯ ಆರೋಪದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್, ಶೇಇನ್, ಕ್ಲಬ್ ಪ್ಯಾಕ್ಟರಿ, ಅಲಿ ಎಕ್ಸ್‌ಪ್ರೆಸ್ ಸೇರಿದಂತೆ ಚೈನಾ ಮೂಲದ 100 ಆ್ಯಪ್‌ಗಳಿಗೆ ನಿಷೇಧ ಹೇರಿತ್ತು.