ನವದೆಹಲಿ:ಭಾರತದ ಮಹತ್ವಾಕಾಂಕ್ಷೆಯ (Gaganyaan) ಗಗನಯಾನ ಮಿಷನ್ ಅಕ್ಟೋಬರ್ 21 ರಿಂದ ಪ್ರಾರಂಭವಾಗುತ್ತಿದೆ. ಈ ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಅತ್ಯಂತ ಕಡಿಮೆ ಭೂಮಿಯ ಕಕ್ಷೆಗೆ (LEO) ಸುರಕ್ಷಿತವಾಗಿ ಕೊಂಡೊಯ್ಯುವುದನ್ನು ಒಳಗೊಂಡಿರುತ್ತದೆ. ನಂತರ ಅವರನ್ನು ಯಶಸ್ವಿಯಾಗಿ ಮರಳಿ ತರಲಾಗುವುದು. ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಿದ ಭಾರತೀಯ ವಾಹನಗಳ ಮೂಲಕ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಮಾನವಸಹಿತ ಮಿಷನ್ ಕಳುಹಿಸುವ ಮೊದಲು, ಅದನ್ನು ನಾಲ್ಕು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಅಕ್ಟೋಬರ್ 21 ಅಂದ್ರೆ ಶನಿವಾರದಂದು ಮೊದಲ ಹಂತದ ಪರೀಕ್ಷೆ ಆರಂಭವಾಗಲಿದೆ. ನಾಳೆ ಬೆಳಗ್ಗೆ 7.30 ರಿಂದ ಮೊದಲ ಹಂತದ ಪ್ರಯೋಗವನ್ನು ವೀಕ್ಷಿಸಬಹುದಾಗಿದೆ.
ನಾಲ್ಕು ಪರೀಕ್ಷೆಗಳು: ಗಗನಯಾನ ಮಿಷನ್‌ನ ಮೊದಲ ಪರೀಕ್ಷಾ ಹಾರಾಟವು ಅಕ್ಟೋಬರ್ 21 ರಂದು ನಡೆಯಲಿದೆ. ಇದನ್ನು ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 ಎಂದು ಹೆಸರಿಸಲಾಗಿದೆ. ಇದಾದ ಬಳಿಕ ಎರಡನೇ ಪರೀಕ್ಷಾರ್ಥ ಹಾರಾಟ ಡಿ-2, ಮೂರನೇ ಪರೀಕ್ಷಾರ್ಥ ಹಾರಾಟ ಡಿ-3 ಹಾಗೂ ನಾಲ್ಕನೇ ಪರೀಕ್ಷಾರ್ಥ ಹಾರಾಟ ಡಿ-4 ಎಂದು ಹೆಸರಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್: ಶನಿವಾರ ಮೊದಲ ಹಂತದ ಪ್ರಯೋಗ ನಡೆಯಲಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಈ ಕಾರ್ಯಾಚರಣೆ ಅಡಿ ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ನಂತರ ಅದನ್ನು ಮತ್ತೆ ಭೂಮಿಗೆ ತರಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್ ಆಗಲಿದ್ದು, ನೌಕಾಪಡೆಯ ನೆರವಿನಿಂದ ಅದನ್ನು ವಾಪಸ್ ಪಡೆಯಲಾಗುವುದು. ಈ ಮಿಷನ್ ಯಶಸ್ವಿಯಾದರೆ, ಭಾರತವು ತನ್ನ ವಾಹನದಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸಬಹುದಾಗಿದೆ.
ಭೂಮಿಯಿಂದ 400 ಕಿಮೀ ಎತ್ತರಕ್ಕೆ ಜಿಗಿಯಲಿದೆ ರಾಕೆಟ್: ಗಗನಯಾತ್ರಿ ಕುಳಿತಿರುವ ಕ್ಯಾಬಿನ್ ಅನ್ನು ಸಿಬ್ಬಂದಿ ಮಾಡ್ಯೂಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ನಾವು ಬಾಹ್ಯಾಕಾಶದ ಬಗ್ಗೆ ಮಾತನಾಡುವಾಗ ಅಂದರೆ ಭೂಮಿಯಿಂದ 400 ಕಿಲೋಮೀಟರ್ವರೆಗೆ ಹೋಗುವುದು ಮತ್ತು ನಂತರ ಆ ಎತ್ತರದಿಂದ ಭೂಮಿಗೆ ಕರೆತರಲಾಗುವುದು. ಶೌಚಾಲಯ, ಆಹಾರ ಸಂಗ್ರಹಣೆ, ಸಂಚರಣೆ ವ್ಯವಸ್ಥೆ ಸೇರಿದಂತೆ ಕ್ಯಾಬಿನ್‌ನಲ್ಲಿ ಎಲ್ಲ ಸೌಲಭ್ಯಗಳು ಇದರಲ್ಲಿ ಲಭ್ಯವಿರುತ್ತದೆ. ಕ್ಯಾಬಿನ್ ಒಳಗೆ ಬಾಹ್ಯಾಕಾಶ ವಿಕಿರಣದ ಪರಿಣಾಮವಿಲ್ಲ ಎಂದು ಇಸ್ರೋ ಹೇಳಿದೆ.
ಗಗನಯಾತ್ರಿ ಹೇಗೆ ಇಳಿಯುತ್ತಾರೆ?: ಇದರಲ್ಲಿ ಮುಖ್ಯವಾಗಿ ಎರಡು ವ್ಯವಸ್ಥೆಗಳಿವೆ. ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್. ಭೂಮಿಯಿಂದ 17 ಕಿಲೋಮೀಟರ್ ಎತ್ತರದಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಸಹಾಯ ಮಾಡುತ್ತದೆ ಮತ್ತು ಗಗನಯಾತ್ರಿ ಪ್ಯಾರಾಚೂಟ್ ಸಹಾಯದಿಂದ ಇಳಿಯಲು ಸಾಧ್ಯವಾಗುತ್ತದೆ.