ನವದೆಹಲಿ :ರಸ್ತೆ ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸದೊಂದು ಯೋಜನೆಗೆ ಕೈಹಾಕಿದ್ದಾರೆ. ವಾಣಿಜ್ಯ ಟ್ರಕ್ ಚಾಲಕರಿಗೂ ಪೈಲಟ್ಗಳ ಮಾದರಿ ಚಾಲನಾ ಸಮಯ ನಿಗದಿಗೊಳಿಸುವ ನಿರ್ಧಾರ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಪೈಲಟ್ಗಳಂತೆ ಟ್ರಕ್ ಚಾಲಕರಿಗೂ ಚಾಲನಾ ಸಮಯ ನಿಗದಿಪಡಿಸಬೇಕು. ಇದರಿಂದ ಆಯಾಸ ರಹಿತ ಡ್ರೈವ್ ಮಾಡಬಹುದಾಗಿದ್ದು, ರಸ್ತೆ ಅಪಘಾತ ಕಡಿಮೆ ಮಾಡಬಹುದಾಗಿದೆ ಎಂದಿದ್ದಾರೆ.
ಯುರೋಪ್ ದೇಶಗಳಲ್ಲಿ ಚಾಲನೆಯಲ್ಲಿರುವ ಮಾನದಂಡಗಳಿಗೆ ಸಮನಾದ ವಾಣಿಜ್ಯ ಸೇವೆಗಳಿಗೆ ಆನ್ಬೋರ್ಡ್ ಸ್ಲೀಪ್ ಡಿಟೆಕ್ಷನ್ ಸೆನ್ಸರ್ ಅಳವಡಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿರುವ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.