ನವದೆಹಲಿ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಇಂದು ಬೆಳಗ್ಗೆ ದೆಹಲಿಯ ಪ್ರಸಿದ್ಧ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಿ20 ನಾಯಕರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳುವ ಮುನ್ನ ಸುನಕ್ ಮತ್ತು ಪತ್ನಿ ಮುಂಜಾನೆಯೇ ಅಕ್ಷರಧಾಮಕ್ಕೆ ಆಗಮಿಸಿದರು. ದೇಗುಲದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಅಕ್ಷರಧಾಮ ದೇವಸ್ಥಾನದಲ್ಲಿ ಪತ್ನಿಯೊಂದಿಗೆ ರಿಷಿ ಸುನಕ್ ಈ ಸಂದರ್ಭದಲ್ಲಿ ಸುನಕ್ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರ್ಟ್ ಹಾಗೂ ಪತ್ನಿ ಕುರ್ತಾ ಮತ್ತು ಪಲಾಝೋ ಧರಿಸಿದ್ದರು. ಅಕ್ಷರಧಾಮ ದೇವಸ್ಥಾನದ ಹಿರಿಯ ಅಧಿಕಾರಿಗಳು ಮತ್ತು ಮಾಲೀಕರು ಸುನಕ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ, ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್) ಆಧ್ಯಾತ್ಮಿಕ ಸ್ವಾಮೀಜಿ ಮಹಂತ್ ಸ್ವಾಮಿ ಮಹಾರಾಜ್ ವಿಶೇಷ ಸಂದೇಶ ನೀಡಿದರು.
ಸ್ವಾಮೀಜಿಗಳೊಂದಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಭೇಟಿಗೆ ಮುಂಚಿತವಾಗಿ ದೇವಾಲಯದ ಸುತ್ತಮುತ್ತ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯುಕೆ ಪಿಎಂ, ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.
ಬಿಎಪಿಎಸ್ ಹೊರಡಿಸಿದ ಹೇಳಿಕೆಯಲ್ಲಿ, "ಬ್ರಿಟಿಷ್ ಪ್ರಧಾನಿ ಅವರು ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದು 100 ಎಕರೆ ವಿಸ್ತೀರ್ಣದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೀರ್ಣವಾಗಿದೆ. ಭಾರತದ ಸಂಪ್ರದಾಯ ಮತ್ತು ಪ್ರಾಚೀನ ವಾಸ್ತುಶಿಲ್ಪ, ಸನಾತನ ಹಿಂದೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನಂಬಿಕೆ, ಭಕ್ತಿ ಮತ್ತು ಸಾಮರಸ್ಯ, ಆಧ್ಯಾತ್ಮಿಕ ಸಂದೇಶವನ್ನು ಉತ್ತೇಜಿಸುತ್ತದೆ. ಮುಖ್ಯ ದೇವಾಲಯದ ಸಂಕೀರ್ಣದಲ್ಲಿ ಸುನಕ್ ಮತ್ತು ಪತ್ನಿ ನಮನ ಸಲ್ಲಿಸಿದರು. ಕಲೆ ಮತ್ತು ವಾಸ್ತುಶಿಲ್ಪವನ್ನು ಮೆಚ್ಚಿಕೊಂಡರು. ಇದಕ್ಕೂ ಮುನ್ನಾ ಶ್ರೀ ನೀಲಕಂಠ ವರ್ಣಿ ಮಹಾರಾಜರ ಮೂರ್ತಿಗೆ ಅಭಿಷೇಕ ನೆರವೇರಿಸಿ ವಿಶ್ವ ಶಾಂತಿ, ಪ್ರಗತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸಿದರು" ಎಂದು ತಿಳಿಸಿದೆ.
ಇದನ್ನೂ ಓದಿ :ಜಿ20: 200 ಗಂಟೆಗಳ ನಿರಂತರ ಮಾತುಕತೆ, 300 ದ್ವಿಪಕ್ಷೀಯ ಸಭೆಗಳ ಫಲವೇ ಐತಿಹಾಸಿಕ ನವದೆಹಲಿ ಘೋಷಣೆ!
ಸುನಕ್ ಹೇಳಿಕೆಯಲ್ಲಿ, 'ನನ್ನ ಪತ್ನಿ ಮತ್ತು ನಾನು ಇಂದು ಬೆಳಗ್ಗೆ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿರುವುದು ಸಂತಸ ನೀಡಿದೆ. ಈ ದೇವಾಲಯದ ಸೌಂದರ್ಯ, ಶಾಂತಿ, ಸೌಹಾರ್ದತೆ ಮತ್ತು ಸಾರ್ವತ್ರಿಕ ಸಂದೇಶಕ್ಕೆ ನಾವು ಬೆರಗಾದೆವು. ಇದು ಪೂಜಾ ಸ್ಥಳ ಮಾತ್ರವಲ್ಲದೇ ಐತಿಹಾಸಿಕ ತಾಣವೂ ಆಗಿದೆ. ಭಾರತದ ಮೌಲ್ಯಗಳು, ಸಂಸ್ಕೃತಿ, ಕೊಡುಗೆಯನ್ನು ಜಗತ್ತಿಗೆ ಪ್ರತಿಬಿಂಬಿಸುತ್ತದೆ' ಎಂದು ತಿಳಿಸಿದ್ದಾರೆ.
ದೆಹಲಿಯ ಅಕ್ಷರಧಾಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಸಂಸ್ಥೆಯ ಹಿರಿಯ ಸ್ವಾಮೀಜಿ ಬ್ರಹ್ಮವಿಹಾರಿ ಸ್ವಾಮಿ ಮಾತನಾಡಿ, "ಬ್ರಿಟನ್ ಪ್ರಧಾನಿ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇಂದು ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಭೇಟಿ ನೀಡಿದರು. ಮಹಂತ್ ಸ್ವಾಮಿ ಮಹಾರಾಜ್ ಅವರ ಶಾಂತಿ, ಏಕತೆ ಮತ್ತು ಸಾರ್ವಜನಿಕ ಸೇವೆಯ ಸಂದೇಶವನ್ನು ಅವರೊಂದಿಗೆ ಹಂಚಿಕೊಳ್ಳಲಾಯಿತು" ಎಂದರು.