ನವದೆಹಲಿ: ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರು ಪ್ರಸ್ತಾಪಿಸಿರುವ ಶಾಂತಿ ಸಂಧಾನ ಸೂತ್ರವನ್ನು ನಾವು ಬೆಂಬಲಿಸುತ್ತೇವೆ ಎಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಹೇಳಿದ್ದಾರೆ. ಶುಕ್ರವಾರ ಜಿ 20 ದೆಹಲಿ ಶೃಂಗಸಭೆ 2023 ಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಅವರು ಮಾತನಾಡಿದರು.
ನವದೆಹಲಿ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ಯ ಖಾಯಂ ಸದಸ್ಯರನ್ನಾಗಿ ಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ ಒಕ್ಕೂಟ ಹೇಳಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಮಾತನಾಡಿದ ಮೈಕೆಲ್, ರಷ್ಯಾ ಉಕ್ರೇನ್ನಲ್ಲಿ ಮುಗ್ಧ ನಾಗರಿಕರ ಮೇಲೆ ದಾಳಿ ಮುಂದುವರಿಸಿದೆ ಮತ್ತು ಯುರೋಪಿಯನ್ ಯುನಿಯನ್ ಉಕ್ರೇನ್ ಅನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
"ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಯುರೋಪಿಯನ್ ಒಕ್ಕೂಟದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರ ಶಾಂತಿ ಸೂತ್ರವನ್ನು ನಾವು ಬೆಂಬಲಿಸುತ್ತೇವೆ" ಎಂದು ಅವರು ತಿಳಿಸಿದರು.
"ನಾವು ಇಲ್ಲಿ ಮಾತನಾಡುತ್ತಿರುವ ಸಮಯದಲ್ಲಿಯೂ ಸಾರ್ವಭೌಮ ರಾಷ್ಟ್ರವಾದ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ, ಮುಗ್ಧ ಜನರನ್ನು ಕೊಲ್ಲುತ್ತಿದೆ ಮತ್ತು ಉಕ್ರೇನ್ನ ನಗರಗಳನ್ನು ನಾಶಪಡಿಸುತ್ತಿದೆ. ಅದಕ್ಕಾಗಿಯೇ ಇಯು ಉಕ್ರೇನ್ ಅನ್ನು ಬಲವಾಗಿ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಮತ್ತು ರಷ್ಯಾದ ಮೇಲೆ ಒತ್ತಡ ಹೇರುತ್ತದೆ" ಎಂದು ಮೈಕೆಲ್ ಪ್ರತಿಪಾದಿಸಿದರು.