ನವದೆಹಲಿ : ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆಯನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ನಾಯಕರು ನವದೆಹಲಿಗೆ ಆಗಮಿಸಲಿದ್ದಾರೆ ಎಂದು ಭಾರತದ G20 ಸೆಕ್ರೆಟರಿಯೇಟ್‌ನ ವಿಶೇಷ ಕಾರ್ಯದರ್ಶಿ ಹಾಗೂ ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥರಾಗಿರುವ ಮುಕ್ತೇಶ್ ಪರದೇಶಿ ಮಾಹಿತಿ ನೀಡಿದ್ದಾರೆ.
"ಕಳೆದ ವರ್ಷದ ಡಿಸೆಂಬರ್ 1 ರಂದು ನಾವು ಜಿ 20 ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇವೆ. ಭಾರತವು ಜಿ 20 ಅಧ್ಯಕ್ಷತೆಯಲ್ಲಿ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಪಾಕಪದ್ಧತಿ, ಕರಕುಶಲ ಮತ್ತು ಸಂಸ್ಕೃತಿಯ ಮೂಲಕ ಪ್ರದರ್ಶಿಸಲು ಯೋಜಿಸುತ್ತಿದೆ. ಈ G20 ಶೃಂಗಸಭೆಯು 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿದೆ. ಜೊತೆಗೆ, ನಾವು ಇನ್ನೂ ಒಂಬತ್ತು ದೇಶಗಳು ಮತ್ತು ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ವಿಶೇಷ ಆಹ್ವಾನಗಳನ್ನು ನೀಡಿದ್ದೇವೆ. ಸುಮಾರು 40 ಕ್ಕೂ ಹೆಚ್ಚು ನಿಯೋಗಗಳು ಆಗಮಿಸುತ್ತವೆ. ಆದ್ದರಿಂದ ನಾವು ಸಜ್ಜಾಗುತ್ತಿದ್ದೇವೆ" ಎಂದರು.
ಭಾರತೀಯ ಸಂಸ್ಕೃತಿ, ಕರಕುಶಲ ಮತ್ತು ಪಾಕಪದ್ಧತಿಯನ್ನು ಪ್ರದರ್ಶಿಸಲು ಮುಂದಾಗಿದ್ದೇವೆ. ಹಾಗೆಯೇ, ಯುಪಿಐ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ, ಕೋವಿನ್ ಅಪ್ಲಿಕೇಶನ್ ಅನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು 1 ಶತಕೋಟಿ ಜನರು ಆಧಾರ್‌ನೊಂದಿಗೆ ಹೇಗೆ ಜೋಡಣೆಗೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ :ನವದೆಹಲಿಯಲ್ಲಿ ಜಿ20 ಶೃಂಗ: ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಲ್ಕು ದಿನಗಳ ಭಾರತ ಪ್ರವಾಸ