ನವದೆಹಲಿ: ಜಿ20 ಶೃಂಗಸಭೆ ಪ್ರಾರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿರುವಾಗಲೇ, ಯುರೋಪಿಯನ್ ಯೂನಿಯನ್ನ ಹಿರಿಯ ಅಧಿಕಾರಿಯೊಬ್ಬರು, ಉಕ್ರೇನ್ ಯುದ್ಧದ ಕುರಿತು ಭಾರತ ರಚಿಸಿರುವ ಪಠ್ಯದ ಕರಡು ಜಿ7 ಹಾಗೂ ಯುರೋಪಿಯನ್ ಯೂನಿಯನ್ ಸದಸ್ಯರು ಅಂಗೀಕರಿಸುವಷ್ಟು ಇಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಯುರೋಪಿಯನ್ ಯೂನಿಯನ್ ಅಧಿಕಾರಿ, ಸೆಪ್ಟೆಂಬರ್ 10ರಂದು ನಡೆಯಲಿರುವ ಶೃಂಗಸಭೆಯ ಕೊನೆಯಲ್ಲಿ ರಾಜಿ ಕುರಿತು ಬಿಡುಗಡೆ ಮಾಡಲಿರುವ ಜಂಟಿ ಹೇಳಿಕೆಯ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ ನಾನು ಆಶಾವಾದಿಯಲ್ಲ ಎನ್ನುವ ಹೇಳಿಕೆಯನ್ನೂ ಈ ಅಧಿಕಾರಿ ನೀಡಿದ್ದಾರೆ.
ವಿಶೇಷವಾಗಿ ಉಕ್ರೇನ್ನಂತಹ ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ಬಹಳ ಕಠಿಣ ಮಾತುಕತೆಗಳು ನಡೆದಿವೆ ಎಂದು ಹೇಳಿದ ಅಧಿಕಾರಿ, ಸದ್ಯ ಭಾರತ ಪ್ರಸ್ತುತ ಪಡಿಸಿರುವ ಕರಡು ಸಾಕಾಗುವುದಿಲ್ಲ. ಜಿ7, ಯುರೋಪಿಯನ್ ಹಾಗೂ ಅದರ ಸದಸ್ಯ ರಾಷ್ಟ್ರಗಳು ಈ ಕರಡು ಸಾಕಷ್ಟು ಇಲ್ಲ ಎನ್ನುವ ಅಭಿಪ್ರಾಯಪಟ್ಟಿವೆ ಎಂದು ವಿವರಿಸಿದರು.
ಜಂಟಿ ಹೇಳಿಕೆ ಇನ್ನೂ ಸಾಧ್ಯವೇ ಎನ್ನುವ ಪ್ರಶ್ನೆಗೆ ಇಯು ಅಧಿಕಾರಿ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ನಾವು ನೀಡುವ ಪೀಠದ ಹೇಳಿಕೆ ಒಳ್ಳೆಯದಾಗಿರದೇ ಇರಬಹುದು, ಆದರೆ ಅದು ಫಲಿತಾಂಶವಾಗಿರಬಹುದು. 'ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸಲು ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಬಳಸಲಾದ ಹೇಳಿಕೆಯನ್ನು ದುರ್ಬಲಗೊಳಿಸುವಂತಹ ಯಾವುದೇ ಭಾಷೆಯನ್ನು ಪಶ್ಚಿಮದ ರಾಷ್ಟ್ರಗಳು ಸ್ವೀಕರಿಸುವುದಿಲ್ಲ' ಎಂದು ಮತ್ತೆ ಒತ್ತಿ ಹೇಳಿದ್ದಾರೆ.