ನವದೆಹಲಿ:ರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ ಆಯೋಜಿಸಲಾಗಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತಾ ವಿಷಯದಲ್ಲೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಈಗಾಗಲೇ ರಾಜಧಾನಿಗೆ ವಿವಿಧ ರಕ್ಷಣಾಪಡೆಗಳು ಆಗಮಿಸಿವೆ. ಪ್ರಮುಖವಾಗಿ 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ನಿಂದ ಸಭೆಗೆ ಆಗಮಿಸುತ್ತಿರುವ ವಿವಿಐಪಿಗಳು ಮತ್ತು ಪ್ರತಿನಿಧಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲಿ ನಿರ್ಮಿತ Tavor X95 ರೈಫಲ್ ಹೊಂದಿರುವ ಉನ್ನತ ತರಬೇತಿ ಪಡೆದುಕೊಂಡಿರುವ ಭದ್ರತಾ ಸಿಬ್ಬಂದಿಗಳು G20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ VVIPಗಳು ಮತ್ತು ಪ್ರತಿನಿಧಿಗಳಿಗೆ ರಕ್ಷಣೆ ಒದಗಿಸಲಿದ್ದಾರೆ.
ದೆಹಲಿಯ ವಿವಿಧ ಸ್ಥಳಗಳು, ಹೋಟೆಲ್‌ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ಬುಧವಾರ ತಿಳಿಸಿವೆ. ಸಭೆಗೆ ಆಗಮಿಸಲಿರುವ ವಿವಿಐಪಿಗಳು ಮತ್ತು ಗಣ್ಯರನ್ನು ದೆಹಲಿಯ ವಿವಿಧ ಐಷಾರಾಮಿ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇವರು ಉಳಿದು ಕೊಳ್ಳಲಿರುವ ಹೋಟೆಲ್‌ಗಳ ಸುತ್ತಲೂ ಮೂರು ಹಂತದ ಭದ್ರತೆ ವ್ಯವಸ್ತೆ ಇರಲಿದೆ. ಇವುಗಳಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿನ ಮೀಸಲು ಪೊಲೀಸ್ ಪಡೆಯ (CRPF) ವಿವಿಐಪಿ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದಿರುವ 1,000ಕ್ಕೂ ಹೆಚ್ಚು ಜನರ ವಿಶೇಷ ರಕ್ಷಣಾ ತಂಡವು ಕಾವಲಿನಲ್ಲಿರಲಿದೆ.
ನಿಯೋಜನೆಗೊಳ್ಳುವ ವಿಶೇಷ ರಕ್ಷಣಾ ಪಡೆಗಳು ಇಸ್ರೇಲ್ ನಿರ್ಮಿತ ಟಾವರ್ ಎಕ್ಸ್ 95 ರೈಫಲ್ ಹೊಂದಿರಲಿದ್ದಾರೆ. ಈ ರೈಫಲ್ನ ವಿಶೇಷತೆ ಎಂದರೆ ಅಸಾಲ್ಟ್ ರೈಫಲ್ಸ್ ಕಾರ್ಬೈನ್ ಅಥವಾ ಸಬ್ ಮೆಷಿನ್ಗನ್, ಆಗಿಯೂ ಬಳಸಬಹುದಾಗಿದೆ. ಈ ರೈಫಲ್ ಅನ್ನು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಳಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ, ಸಿಆರ್ಪಿಎಫ್ನ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ತಂಡವು ನಕ್ಸಲೀಯರ ವಿರುದ್ಧ ಈ ಮೂರು ಸಾಮರ್ಥ್ಯದ ರೈಫಲ್ ಗಳನ್ನು ಬಳಸುತ್ತದೆ.