ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿನ ಭಾರತ ಮಂಟಪದಲ್ಲಿ ಸೆಪ್ಟೆಂಬರ್ 9 ಮತ್ತು 10 (ಇಂದು ಮತ್ತು ನಾಳೆ) ನಡೆಯಲಿರುವ ಜಿ20 ಶೃಂಗಸಭೆಗೆ ಆಗಮಿಸಿದ ವಿಶ್ವದ ಪ್ರಮುಖ ನಾಯಕರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ಎರಡು ದಿನಗಳ ಉನ್ನತ ಮಟ್ಟದ ವಿಶ್ವ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಭಾಷಣ ಮಾಡಿದರು.
ಆಫ್ರಿಕನ್ ಒಕ್ಕೂಟಕ್ಕೆ G20 ಸದಸ್ಯತ್ವ ಘೋಷಣೆ:ಶೃಂಗಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ20 ಯ ಖಾಯಂ ಸದಸ್ಯತ್ವ ಪಡೆದು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಆಹ್ವಾನಿಸಿದರು. ಆಫ್ರಿಕನ್ ಯೂನಿಯನ್ಗೆ G20 ಖಾಯಂ ಸದಸ್ಯತ್ವ ಘೋಷಣೆ ಮಾಡಿದರು.
ಮೋದಿ ಸ್ವಾಗತ ಭಾಷಣ:ಜಿ20 ಶೃಂಗಸಭೆ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಭಾಷಣ ಮಾಡಿದರು. "ಜಾಗತಿಕವಾಗಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಜಗತ್ತಿಗೆ ಕರೆ ನೀಡುತ್ತಿದೆ. ನಾವೆಲ್ಲರೂ ಒಟ್ಟಾಗಿ ಚಲಿಸುವ ಸಮಯ ಇದು. ಈ ಬಾರಿ 'ಸಬ್ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ, ಸಬ್ ಕಾ ಪ್ರಯಾಸ್' ಎಂಬ ಜ್ಯೋತಿಯನ್ನು ಹೊತ್ತೊಯ್ಯಬಹುದು. ಅದು ಉತ್ತರ ಮತ್ತು ದಕ್ಷಿಣದ ನಡುವಿನ ಒಡಕು, ಪೂರ್ವ ಮತ್ತು ಪಶ್ಚಿಮ ನಡುವಿನ ಅಂತರ, ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆ, ಭವಿಷ್ಯದ ಪೀಳಿಗೆಗೆ ನಾವು ಇದಕ್ಕೆ ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ'' ಎಂದು ಪ್ರಧಾನಿ ಮೋದಿ ಹೇಳಿದರು.