ನವದೆಹಲಿ: ವಿಶ್ವ ಆರ್ಥಿಕತೆ, ರಷ್ಯಾ - ಉಕ್ರೇನ್ ಯುದ್ಧ, ಹವಾಮಾನ ಬದಲಾವಣೆ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ವಿಶ್ವದ ಅಗ್ರ ಇಪ್ಪತ್ತು ಆರ್ಥಿಕತೆಗಳ ನಾಯಕರು ಈ ವಾರಾಂತ್ಯದಲ್ಲಿ ನವದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಈ ಮಹತ್ವದ ಹಾಗೂ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಭೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗುತ್ತಿದ್ದಾರೆ. ಹೀಗಾಗಿ ಜಿ-20ಯ ಉತ್ಸಾಹ ಸ್ಪಲ್ಪ ಮಟ್ಟಿಗೆ ಕುಸಿದಂತೆ ಕಾಣುತ್ತಿದೆ. ಏಕೆಂದರೆ ಇವುಗಳ ಸರ್ವೋಚ್ಚ ನಾಯಕರ ಅನುಪಸ್ಥಿತಿಯಲ್ಲಿ ಒಮ್ಮತ ರೂಪಿಸುವುದು ಸವಾಲಿನ ಕೆಲಸವಾಗಬಹುದು.
ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಇತರ ಪ್ರಮುಖ ವಿಶ್ವ ನಾಯಕರೆಂದರೆ ಅದು ಅಮೆರಿಕದ ಅಧ್ಯಕ್ಷ ಜೋ ಬೈಡನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸೌದಿ ಅರೇಬಿಯಾದ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಜಪಾನ್‌ನ ಫ್ಯೂಮಿಯೊ ಕಿಶಿಡಾ ಸೇರಿ ಇನ್ನಿತರ ನಾಯಕರಾಗಿದ್ದಾರೆ. ಆದಾಗ್ಯೂ, ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಬದಲಿಗೆ ಚೀನಾದ ಪ್ರಧಾನಿ ಲಿ ಕಿಯಾಂಗ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಲ್ಲಿನ ಸರ್ಕಾರಗಳ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿ ಜಿ- 20 ಕಾರ್ಯನಿರ್ವಹಿಸಲಿದೆ. ಜಾಗತಿಕ ಆರ್ಥಿಕತೆ, ಅದು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಸೂಚಿಸಲು ಈ ಜಿ-20 ಸಭೆ ನಿರ್ಣಾಯಕ ಪಾತ್ರ ವಹಿಸಲಿದೆ. G20 ರಾಷ್ಟ್ರಗಳು ವಿಶ್ವದ ಪ್ರಮುಖ ಮತ್ತು ವ್ಯವಸ್ಥಿತವಾಗಿರುವ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ . G20 ಸದಸ್ಯರು ಜಾಗತಿಕ GDPಯ ಶೇ 85ರಷ್ಟು ಪಾಲು ಹೊಂದಿವೆ, ಅಂತಾರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಈ 20 ರಾಷ್ಟ್ರಗಳೇ ಪ್ರತಿನಿಧಿಸುತ್ತವೆ.