ನವದೆಹಲಿ : ರಷ್ಯಾ-ಉಕ್ರೇನ್ ಸಂಘರ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಸಲುವಾಗಿ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಜಿ20 ಘೋಷಣೆಯ ಕುರಿತು ಒಮ್ಮತ ಮೂಡಿಸಲು ಭಾರತೀಯ ರಾಜತಾಂತ್ರಿಕರ ತಂಡವು 200 ಗಂಟೆಗಳ ನಿರಂತರ ಮಾತುಕತೆಗಳನ್ನು ನಡೆಸಿದೆ ಎಂದು ಭಾರತದ ನಿಯೋಗದ ಮುಖ್ಯಸ್ಥ (ಶೆರ್ಪಾ-ಪ್ರತಿನಿಧಿ) ಅಮಿತಾಭ್ ಕಾಂತ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡ ಜಿG20 ಶೆರ್ಪಾ ಅಮಿತಾಭ್ ಕಾಂತ್ ಅವರು, ಶೃಂಗಸಭೆಯ ಸಂದರ್ಭದಲ್ಲಿ ತಮ್ಮ ತಂಡದ ಇಬ್ಬರು ಸದಸ್ಯರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಜಂಟಿ ಕಾರ್ಯದರ್ಶಿಗಳಾದ ಈನಮ್ ಗಂಭೀರ್ ಮತ್ತು ಕೆ.ನಾಗರಾಜ ನಾಯ್ಡು ಸೇರಿದಂತೆ ರಾಜತಾಂತ್ರಿಕರ ತಂಡವು 300 ದ್ವಿಪಕ್ಷೀಯ ಸಭೆಗಳನ್ನು ನಡೆಸಿತು. ವಿವಾದಾತ್ಮಕ ಉಕ್ರೇನ್ ಸಂಘರ್ಷದ ಕುರಿತು ತಮ್ಮ ಸಹವರ್ತಿಗಳೊಂದಿಗೆ 15 ಕರಡುಗಳನ್ನು ಪ್ರಸಾರ ಮಾಡಿತು. ಈ ಮೂಲಕ ಜಿ20 ನಾಯಕರಲ್ಲಿ ಶೃಂಗಸಭೆಯ ಮೊದಲ ದಿನವೇ ಒಮ್ಮತ ಮೂಡಿಸಲಾಗಿದೆ ಎಂದರು.
"ಇಡೀ ಶೃಂಗಸಭೆಯ ಅತ್ಯಂತ ಸಂಕೀರ್ಣವಾದ ಭಾಗವೆಂದರೆ ರಷ್ಯಾ-ಉಕ್ರೇನ್ ಕುರಿತು ಒಮ್ಮತ ಉಂಟುಮಾಡುವುದು. ಇದನ್ನು 200 ಗಂಟೆಗಳ ತಡೆರಹಿತ ಮಾತುಕತೆಗಳು, 300 ದ್ವಿಪಕ್ಷೀಯ ಸಭೆಗಳು ಮತ್ತು 15 ಕರಡುಗಳ ಪರಿಷ್ಕರಣೆ ಪ್ರಕ್ರಿಯೆಯ ನಂತರ ಜಿ20 ರಾಷ್ಟ್ರಗಳು ಅಭೂತಪೂರ್ವ ಒಮ್ಮತಕ್ಕೆ ಬಂದಿವೆ. ಉಕ್ರೇನ್ ಸಂಘರ್ಷ ಮತ್ತು ಹವಾಮಾನ ಬದಲಾವಣೆಯ ಸುತ್ತಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಿಖರವಾದ ಪ್ರಯತ್ನಗಳನ್ನು ಒಳಗೊಂಡಿರುವ ಈ ಗಮನಾರ್ಹ ಸಾಧನೆಯು ಐತಿಹಾಸಿಕ ನವದೆಹಲಿ ಘೋಷಣೆಯ ಅಂಗೀಕಾರದಲ್ಲಿ ಕೊನೆಗೊಂಡಿತು" ಎಂದು ಅವರು ವಿವರಿಸಿದರು.