ಶ್ರೀನಗರ: ದೇಶದ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಾಳೆಯಿಂದ (ಮೇ 22) ಮೂರು ದಿನಗಳ ಮಹತ್ವದ ಜಿ20 ಸಭೆಗಳು ಆರಂಭವಾಗಲಿವೆ. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಶೇಷ ಕಲಂ ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಜಾಗತಿಕ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಇಡೀ ಕಣಿವೆ ನಾಡಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.
ಭಯೋತ್ಪಾದಕ ಚಟುವಟಿಕೆ ಪೀಡಿತ ನಾಡಿನಲ್ಲಿ ಜಿ20 ಸಭೆಗಳನ್ನು ಸುಗಮವಾಗಿ ನಡೆಸುವುದು ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ನಡುವೆ ಇತ್ತೀಚಿಗೆ ಉಗ್ರ ಚಟುವಟಿಕೆಗಳೂ ಹೆಚ್ಚಾಗಿವೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಏಜೆನ್ಸಿಗಳ ಕಳವಳಕ್ಕೆ ಕಾರಣವಾಗಿದೆ. ಈ ಚಟುವಟಿಕೆಗಳ ನಿಯಂತ್ರಣಕ್ಕೆ ಪಡೆಗಳು ಸರ್ವ ರೀತಿಯಲ್ಲೂ ಪಯತ್ನಿಸುತ್ತಿವೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ಹೆಚ್ಚಿಸಲಾಗಿದೆ. ಪಠಾಣ್‌ಕೋಟ್ - ಜಮ್ಮು ಮತ್ತು ಜಮ್ಮು - ಪೂಂಚ್ ಮತ್ತು ಜಮ್ಮು - ಶ್ರೀನಗರ - ಗಂದರ್‌ಬಲ್ ರಾಷ್ಟ್ರೀಯ ಹೆದ್ದಾರಿಗಳ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷ ನಾಕಾಗಳನ್ನೂ ಸ್ಥಾಪಿಸಲಾಗಿದೆ. ಜಿ20 ಸಮ್ಮೇಳನದ ಸ್ಥಳಗಳು, ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಸುಮಾರು 600 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಿವಿಲ್ ಉಡುಪಿನಲ್ಲಿ ನಿಯೋಜಿಸಲಾಗಿದೆ.
ನೆಲ, ಜಲ, ವಾಯು ಮೂಲಕ ಕಣ್ಗಾವಲು: ಜಿ20 ಸಮ್ಮೇಳನದ ಸ್ಥಳವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಎನ್‌ಎಸ್‌ಜಿ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಮಾಂಡೋಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸಿಆರ್‌ಪಿಎಫ್‌ನ ವಾಟರ್ ವಿಂಗ್ ಮತ್ತು ನೌಕಾಪಡೆಯ ಮಾರ್ಕೋಸ್ ಸ್ಕ್ವಾಡ್‌ನ ಕಮಾಂಡೋಗಳು ತಮ್ಮ ದೋಣಿಗಳಲ್ಲಿ ದಾಲ್ ಸರೋವರದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನೂ ಅಳವಡಿಸಲಾಗಿದ್ದು, ಸಮಾವೇಶ ನಡೆಯುವ ಸ್ಥಳವನ್ನು ವಿಮಾನ ಹಾರಾಟ ನಿಷೇಧಿತ ವಲಯವನ್ನಾಗಿ ಘೋಷಿಸಲಾಗಿದೆ. ಯಾವುದೇ ಅಪಾಯವನ್ನು ಎದುರಿಸಲು ನೆಲ, ಜಲ ಮತ್ತು ವಾಯು ಮೂಲಕ ಕಣ್ಗಾವಲು ಇರಿಸಲಾಗಿದೆ.
ಇಂದಿನಿಂದಲೇ ವಿದೇಶಿ ಅತಿಥಿಗಳ ಆಗಮನ: ಮೇ 22ರಿಂದ ಪ್ರಾರಂಭವಾಗುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದೇಶಿ ಅತಿಥಿಗಳು ಭಾನುವಾರದಿಂದಲೇ ಆಗಮಿಸಲಿದ್ದಾರೆ. ಆದ್ದರಿಂದ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C), ಉತ್ತರ ವಲಯ ಕಮಾಂಡ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಉರಿ ಸೆಕ್ಟರ್‌ನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇನೆಯ ಸನ್ನದ್ಧತೆ ಮತ್ತು ಒಳನುಸುಳುವಿಕೆ ನಿಗ್ರಹ ಕ್ರಮಗಳನ್ನು ಸಹ ಅವರುಗಳು ಪರಿಶೀಲಿಸಿದರು.
ಇದನ್ನೂ ಓದಿ:G20 ಸಭೆಗೂ ಮುನ್ನ ಜಮ್ಮು ಕಾಶ್ಮೀರದಾದ್ಯಂತ ಮತ್ತೆ ಎನ್‌ಐಎ ದಾಳಿ