ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಆಗಮಿಸಿರುವ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರಿಗೆ ಇಲ್ಲಿನ ಭಾರತ ಮಂಟಪದಲ್ಲಿ ಏರ್ಪಡಿಸಿರುವ ಔತಣಕೂಟ ಆರಂಭವಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅಧ್ಯಕ್ಷರಾದ ಮಸತ್ಸುಗು ಅಸಕಾವಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ಅವರ ಪತ್ನಿ ತ್ಶೆಪೋ ಮೊಟ್ಸೆಪೆ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಅವರು ಆಹ್ವಾನಿಸಿದರು.
ಜಿ 20 ಶೃಂಗಸಭೆಯ ಮೊದಲ ದಿನ ಮುಗಿಯುತ್ತಿದ್ದಂತೆ, ನವದೆಹಲಿಯ ಭಾರತ ಮಂಟಪದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ಜಿ 20 ಭೋಜನಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳಿಗೆ ಅನನ್ಯ ಭಾರತೀಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿದೆ. ನಾಯಕರ ಊಟಕ್ಕಾಗಿ ಬೆಳ್ಳಿ ಮತ್ತು ಚಿನ್ನದ ಲೇಪಿತ ಪಾತ್ರೆಗಳನ್ನು ಬಳಸಲಾಗಿದೆ. ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿ ಇದನ್ನು ಬಳಸಲಾಗುತ್ತಿದೆ.
ಔತಣಕೂಟದಲ್ಲಿ ನೀಡಲಾಗುತ್ತಿರುವ ಖಾದ್ಯಗಳಲ್ಲಿ ದೇಶೀಯ ಸೊಗಡಿನ ರುಚಿಯ ಜೊತೆಗೆ ಸಂಪ್ರದಾಯ, ಪದ್ಧತಿ, ಹವಾಮಾನ ಸೇರಿದಂತೆ ವೈವಿಧ್ಯತೆಯನ್ನು ಇದು ಸಾರುತ್ತದೆ. ವಿಶೇಷವಾಗಿ ರಾಗಿಗಳ ಬಳಕೆ ಬಗ್ಗೆ ಉಲ್ಲೇಖವಿದೆ. ಜೊತೆಗೆ ಆಹಾರದ ಪೌಷ್ಟಿಕಾಂಶ ಮತ್ತು ಕೃಷಿ ಆಧಾರ ಮಾಹಿತಿ ಇದೆ.