ಚೆನ್ನೈ: ತಮಿಳುನಾಡಿನಲ್ಲಿ ಅಮ್ಮನ ಸ್ಥಾನ ತುಂಬಬೇಕಿದ್ದ ಚಿನ್ನಮ್ಮ ಶಶಿಕಲಾ ತಮ್ಮ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಇವರು ಅಚ್ಚರಿಯ ನಡೆ ಅಲ್ಲಿನ ಜನತೆಗೆ ನಿರಾಸೆಯನ್ನು ಉಂಟುಮಾಡಿದೆ. ಇವರ ಜೀವನದ ಪ್ರಮುಖ ಅಂಶಗಳು ಇಲ್ಲಿವೆ.
1954ರಲ್ಲಿ ಮನ್ನಾರ್ಗುಡಿಯಲ್ಲಿ ವಿವೇಕಾನಂದಂ ಮತ್ತು ಕೃಷ್ಣವೇಣಿಯ ದಂಪತಿಗೆ ಶಶಿಕಲಾ ಜನಿಸಿದರು. ಇವರಿಗೆ ಸುಂದರವದನಂ, ಜಯರಾಮನ್, ವಿನೋದಗನ್ ಮತ್ತು ದಿವಾಹರನ್ ಎಂಬ ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿ ವನಿತಾಮಣಿ ಇದ್ದು, ಶ್ರೀಮಂತರಲ್ಲದಿದ್ದರೂ ಪ್ರಭಾವಿಯಾದ ಕಲ್ಲಾರ್ ಸಮುದಾಯಕ್ಕೆ ಸೇರಿದವರಾಗಿದ್ದರು.
ಶಶಿಕಲಾ ಅವರ ಪತಿ ನಟರಾಜನ್ 70ರ ದಶಕದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು, ಇವರಿಂದಲೇ ಶಶಿಕಲಾ ಜಯಲಲಿತಾ ಅವರೊಂದಿಗೆ ಸಂಪರ್ಕ ಸಾಧಿಸಲು ಕಾರಣವಾಗಿದ್ದು, ಎಐಎಡಿಎಂಕೆ ಪಕ್ಷದಲ್ಲಿ ಬೆಳೆಯಲು ಅವಕಾಶ ಸೃಷ್ಟಿಯಾಯಿತು.
ರಾಜಕೀಯಕ್ಕೆ ಬರುವುದಕ್ಕೂ ಮೊದಲು ಶಶಿಕಲಾ ವಿಡಿಯೋ ಚಿತ್ರೀಕರಣದ ಸ್ಟುಡಿಯೋವನ್ನು ಇಟ್ಟಿದ್ದು, ಜಯಲಲಿತಾ ಭಾಗವಹಿಸುತ್ತಿದ್ದ ಮದುವೆಗಳ ಚಿತ್ರೀಕರಣ ಮಾಡುತ್ತಿದ್ದರು. ಇದರೊಂದಿಗೆ ಜಯಲಲಿತಾ ಆತ್ಮೀಯರ ಬಳಗದಲ್ಲಿ ಸೇರ್ಪಡೆಯಾದರು.
ಜಯಲಲಿತಾ ರಾಜಕೀಯ ಆರಂಭದ ದಿನಗಳಲ್ಲಿ ಶಶಿಕಲಾ ಅವರು ತಮ್ಮ ಕಲ್ಲಾರ್ ಸಮುದಾಯದ ಮುಖಾಂತರ ಅನುಕೂಲ ಮಾಡಿಕೊಟ್ಟರು. ಇವರಿಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ, ಜಯಲಲಿತಾ ಸರ್ಕಾರದ ಎಲ್ಲಾ ಹಂತಗಳಲ್ಲಿ ಇವರು ಪ್ರಭಾವ ಬೀರುವ ಮಟ್ಟಿಗೆ ಶಶಿಕಲಾ ಬೆಳೆದಿದ್ದರು.
1990ರಲ್ಲಿ ಶಶಿಕಲಾ ತಮ್ಮ ಪತಿ ನಟರಾಜನ್ ಅವರು ಜಯಲಲಿತಾ ಅವರ ಬಳಗದಿಂದ ಹೊರಬರುವಂತೆ ಹೇಳಿದರೂ, ಪತಿಯ ಮಾತನ್ನು ಧಿಕ್ಕರಿಸಿ, ಜಯಲಲಿತಾ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನು ಶಶಿಕಲಾ ಕೈಗೊಂಡಿದ್ದರು. ಪತಿಯಿಂದ ದೂರ ಉಳಿದು ಪೊಯೇಸ್ ಗಾರ್ಡನ್ನ ವೇದ ನಿಲಯಂ ರೆಸಿಡೆನ್ಸಿಯಲ್ಲಿ ವಾಸವಿದ್ದರು.