ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ನೀಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಉದ್ದೇಶಿತ ವಿನ್ಯಾಸದ ಚಿತ್ರಗಳನ್ನು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ಫೋಟೋಗಳಿಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಿನ್ಯಾಸವನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ದೆಹಲಿ ಹವಾಮಾನಕ್ಕೆ ಇದು ಕಾರ್ಯಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಹೊಸ ಯುಗವನ್ನು ಸೂಚಿಸುತ್ತದೆ, ಪುನರಾಭಿವೃದ್ಧಿ ಮಾಡಲಿರುವ ನವ ದೆಹಲಿ ರೈಲ್ವೆ ನಿಲ್ದಾಣ (ಎನ್ಡಿಎಲ್ಎಸ್) ಪ್ರಸ್ತಾವಿತ ವಿನ್ಯಾಸ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿ, ಎರಡು ಚಿತ್ರಗಳನ್ನು ಹಂಚಿಕೊಂಡಿದೆ. ಅಲ್ಲದೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 'ಅಮೃತ್ ಕಾಲ್ ಕಾ ರೈಲ್ವೆ ಸ್ಟೇಷನ್ (ಅಮೃತ್ ಕಾಲದ ರೈಲು ನಿಲ್ದಾಣ) ಎಂದು ಟ್ವೀಟ್ ಮಾಡಿ ಈ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ 25 ಸಾವಿರಕ್ಕೂ ಲೈಕ್ ಮತ್ತು 3,100ಕ್ಕೂ ಹೆಚ್ಚು ರೀಟ್ವೀಟ್ಗಳಾಗಿ ಈ ಫೋಟೋಗಳು ವೈರಲ್ ಆಗಿವೆ.
ತೆರಿಗೆದಾರರ ಹಣ ವ್ಯರ್ಥ ಮಾಡಬೇಡಿ: ರೈಲ್ವೆ ನಿಲ್ದಾಣದ ವಿನ್ಯಾಸದ ಚಿತ್ರದ ಬಗ್ಗೆ ನೆಟಿಜನ್‌ಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಸ್ತೆ ಮತ್ತು ಮೂಲಸೌಕರ್ಯದ ಹೊಸ ಯುಗ ಇಲ್ಲಿದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಹಣ ವ್ಯರ್ಥ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.