ನವದೆಹಲಿ:ಆ.15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ, ಭಾರತೀಯ ಸಶಸ್ತ್ರ ಪಡೆಗಳ ಡ್ರೆಸ್ ರಿಹರ್ಸಲ್ ಇಂದು ಇಲ್ಲಿನ ರಾಷ್ಟ್ರೀಯ ರಾಜಧಾನಿಯ ಕೆಂಪು ಕೋಟೆಯಲ್ಲಿ ಪ್ರಾರಂಭವಾಗಿದೆ. ಇಂದಿನ ಫುಲ್ ಡ್ರೆಸ್ ರಿಹರ್ಸಲ್(ಸಂಪೂರ್ಣ ಉಡುಗೆ ಪೂರ್ವಾಭ್ಯಾಸ)ನಲ್ಲಿ ಮಿಲಿಟರಿ ಬ್ಯಾಂಡ್, ನೌಕಾ ಮತ್ತು ವಾಯುಪಡೆಯ ಘಟಕಗಳು ಸೇರಿದಂತೆ ವಿವಿಧ ತುಕಡಿಗಳು ಭಾಗವಹಿಸಿದ್ದವು. 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಭದ್ರತೆ ಬಿಗಿಗೊಳಿಸಲಾಗಿದೆ.
ಭಾರತ ಮಂಗಳವಾರ ತನ್ನ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ತಮ್ಮ ಮನ್ ಕಿ ಬಾತ್ ಪ್ರಸಾರದಲ್ಲಿ 'ಮೇರಿ ಮಟ್ಟಿ ಮೇರಾ ದೇಶ್' (ನನ್ನ ಮಣ್ಣು, ನನ್ನ ದೇಶ) ಅಭಿಯಾನವನ್ನು ಘೋಷಿಸಿದರು. ಈ ಅಭಿಯಾನವು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಧೈರ್ಯಶಾಲಿಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಇದರ ಅಡಿಯಲ್ಲಿ ನಮ್ಮ ಅಮರ ಹುತಾತ್ಮರ ಸ್ಮರಣಾರ್ಥ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಯೋಧರ ಸ್ಮರಣಾರ್ಥ ದೇಶಾದ್ಯಂತ ಲಕ್ಷಗಟ್ಟಲೆ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಅಳವಡಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ದೇಶಾದ್ಯಂತ ನಾಗರಿಕ ಸಮಾಜ ಸಂಸ್ಥೆಗಳು ಪ್ರಾರಂಭಿಸಿವೆ. 'ಮೇರಿ ಮಟ್ಟಿ ಮೇರಾ ದೇಶ್' ಅಭಿಯಾನದಡಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆಯೋಜಿಸಿದ 'ಹರ್ ಘರ್ ತಿರಂಗಾ' ರ‍್ಯಾಲಿಯಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮಾಡುವ ಭಾಷಣವನ್ನು ಕೇಳಲು 1,800 ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ. ಇತರೆ ವಿಶೇಷ ಅತಿಥಿಗಳು ಮತ್ತು ಆಹ್ವಾನಿತರಲ್ಲಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ರೈತರು, ಸರಪಂಚರು, ಶಿಕ್ಷಕರು, ಮೀನುಗಾರರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಸೇರಲಿದ್ದಾರೆ.
ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಜಾವೇದ್ ಮೊಹಮ್ಮದ್: ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಭಾರತದಾದ್ಯಂತದ 50 ಮಂದಿ ನರ್ಸಿಂಗ್ ಸಿಬ್ಬಂದಿಯನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಇಂತಹ ಕ್ಷಣಗಳು ಶುಶ್ರೂಷಕರನ್ನು ಪ್ರೇರೇಪಿಸುತ್ತವೆ ಮತ್ತು ಇದು ಶುಶ್ರೂಷೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ನರ್ಸಿಂಗ್ ಸಿಬ್ಬಂದಿ ಜಾವೇದ್ ಮೊಹಮ್ಮದ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.