ಕರ್ನಾಟಕ

karnataka

By

Published : Jan 20, 2023, 10:28 PM IST

Updated : Jan 21, 2023, 1:09 PM IST

ETV Bharat / bharat

ಮೆಲ್ಬೋರ್ನ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನ ಆಕಾಶದಲ್ಲಿ ಇದ್ದಾಗಲೇ ಇಂಧನ ಕೊರತೆ: ಮುಂದೇನಾಯ್ತು?

ಮೆಲ್ಬೋರ್ನ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಂಧನ ಕೊರತೆ ಉಂಟಾಗಿ ಆತಂಕ ಸೃಷ್ಟಿಸಿದ್ದ ಘಟನೆ ಜರುಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

fuel-ran-out-in-mid-air-flight-landed-in-chennai
ಮೆಲ್ಬೋರ್ನ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನ ಆಕಾಶದಲ್ಲಿ ಇದ್ದಾಗಲೇ ಇಂಧನ ಖಾಲಿ

ಚೆನ್ನೈ (ತಮಿಳುನಾಡು): ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಿಂದ ದೆಹಲಿಗೆ ಹೊರಟಿದ್ದ ಏರ್​​ ಇಂಡಿಯಾ ವಿಮಾನವು ಆಕಾಶದಲ್ಲಿ ಹಾರಾಟ ಮಾಡುತ್ತಿರುವಾಗಲೇ ಇಂಧನ ಖಾಲಿಯಾಗುವ ಹಂತಕ್ಕೆ ತಲುಪಿದ ಘಟನೆ ಇಂದು ಸಂಜೆ ನಡೆದಿದೆ. ಇಂಧನ ಖಾಲಿಯಾಗುತ್ತಿರುವ ಗಮನ ಮನಗಂಡ ತಕ್ಷಣವೇ ಎಚ್ಚೆತ್ತ ಪೈಲಟ್​ ವಿಮಾನವನ್ನು ತಮಿಳುನಾಡು ರಾಜ್ಯಧಾನಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಹೀಗಾಗಿ ವಿಮಾನದಲ್ಲಿದ್ದ 277 ಜನ ಪ್ರಯಾಣಿಕರು ನಿಟ್ಟುಸಿರುವ ಬಿಡುವಂತೆ ಆಗಿದೆ.

ಇಷ್ಟಕ್ಕೂ ಆಗಿದ್ದೇನು?:ಮೆಲ್ಬೋರ್ನ್‌ನಿಂದ ಏರ್ ಇಂಡಿಯಾ ಏರ್‌ಲೈನ್ಸ್ ಡ್ರೀಮ್‌ಲೈನರ್ ವಿಮಾನವು 277 ಜನ ಪ್ರಯಾಣಿಕರನ್ನು ಹೊತ್ತು ರಾಜಧಾನಿ ದೆಹಲಿಗೆ ಹೊರಟಿತ್ತು. ಮೆಲ್ಬೋರ್ನ್ ನಗರ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.45ಕ್ಕೆ ಈ ವಿಮಾನವು ಹೊರಟು ದೆಹಲಿ ವಿಮಾನ ನಿಲ್ದಾಣದತ್ತ ಪ್ರಯಾಣಿಸಿತ್ತು. ಸಂಜೆ 6.10ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್​ ಆಗಬೇಕಿತ್ತು. ಆದರೆ, ವಿಮಾನವು ಆಕಾಶದಲ್ಲಿ ಹಾರಾಟ ಮಾಡುತ್ತಿರುವಾಗಲೇ ಅದರಲ್ಲಿನ ಇಂಧನ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮೆಲ್ಬೋರ್ನ್‌ನಿಂದ ದೆಹಲಿಗೆ ಹೊರಟಿದ್ದ ಏರ್​​ ಇಂಡಿಯಾ ವಿಮಾನವು ಗಾಳಿಯಲ್ಲಿದ್ದಾಗಲೇ ಅದರ ಇಂಧನ ಕಡಿಮೆಯಾಗಿತ್ತು. ಇದಾದ ಬಳಿಕ ವಿಮಾನದ ಪೈಲಟ್ ತಕ್ಷಣವೇ ಈ ಬಗ್ಗೆ ದೆಹಲಿಯಲ್ಲಿರುವ ವಿಮಾನ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆಗೆ ವಿಮಾನವು ಚೆನ್ನೈ ವಾಯು ಮಾರ್ಗವನ್ನು ದಾಟುತ್ತಿತ್ತು. ಆದ್ದರಿಂದ ಕೂಡಲೇ ದೆಹಲಿಯ ಕಂಟ್ರೋಲ್ ರೂಂನ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಂತೆ ಆದೇಶಿಸಿದ್ದಾರೆ.

ಅಂತೆಯೇ, ಈ ವಿಮಾನವು ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅಗತ್ಯವಾದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇದರ ನಂತರ ಸಂಜೆ 4.30ಕ್ಕೆ ಚೆನ್ನೈ ಇಂಟರ್​​ ನ್ಯಾಷನಲ್​ ಟರ್ಮಿನಲ್​ನಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಎಲ್ಲ ಪ್ರಯಾಣಿಕರು ಸಹ ವಿಮಾನದಲ್ಲಿ ಸುರಕ್ಷಿತವಾಗಿದ್ದರು. ಬಳಿಕ ವಿಮಾನ ನಿಲ್ದಾಣದಲ್ಲೇ ಈ ವಿಮಾನಕ್ಕೆ ಇಂಧನ ತುಂಬಿಸಲಾಯಿತು ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪೈಲಟ್‌ಗಳ ಕರ್ತವ್ಯದ ಅವಧಿ ಅಂತ್ಯ: ಇದೇ ವೇಳೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಚೆನ್ನೈ ಏರ್​ಪೋರ್ಟ್​​ ಅಧಿಕಾರಿಗಳು, ಹೆಚ್ಚುವರಿ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಮೆಲ್ಬೋರ್ನ್‌ನಿಂದ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೈಲಟ್‌ಗಳು ತಮ್ಮ ಕರ್ತವ್ಯದ ಅವಧಿ ಮುಗಿದಿದೆ ಎಂದು ಘೋಷಿಸಿದರು. ಕೆಲಸದ ಸಮಯ ಮುಗಿಯುವಾಗ ಆ ವಿಮಾನ ಎಲ್ಲಿ ಲ್ಯಾಂಡ್​ ಆಗುತ್ತಿರುತ್ತದೋ ಆ ನಿಲ್ದಾಣದಲ್ಲಿ ಪೈಲಟ್​ ತಮ್ಮ ಕರ್ತವ್ಯ ಅಂತ್ಯಗೊಳಿಸುವುದು ವಿಮಾನ ಸುರಕ್ಷತೆ ಕಾಯ್ದೆಯ ನಿಯಮಾವಳಿ ಆಗಿದೆ. ಹೀಗಾಗಿ ಪೈಲಟ್ ಮತ್ತು ಸಹ ಪೈಲಟ್ ಚೆನ್ನೈನಲ್ಲಿ ವಿಶ್ರಾಂತಿ ಪಡೆಯಲಿದ್ದೇವೆ ಎಂದು ಹೇಳಿ ವಿಮಾನದಿಂದ ಇಳಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದಾದ ನಂತರ ಏರ್ ಇಂಡಿಯಾ ವಿಮಾನವು ಚೆನ್ನೈ ವಿಮಾನ ನಿಲ್ದಾಣದಿಂದ ಬದಲಿ ಪೈಲಟ್‌ಗಳನ್ನು ಕರೆಸಿದೆ. ಪರ್ಯಾಯ ಪೈಲಟ್‌ಗಳೊಂದಿಗೆ ವಿಮಾನವು ಚೆನ್ನೈ ಸಂಜೆ 5.30ರ ಸುಮಾರಿಗೆ ದೆಹಲಿಗೆ ಹೊರಟಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೆಲ್ಬೋರ್ನ್‌ನಿಂದ ನಿರ್ಗಮಿಸುವಾಗ ವಿಮಾನದಲ್ಲಿ ಏಕೆ ಸಂಪೂರ್ಣವಾಗಿ ಇಂಧನ ತುಂಬಿಸಿರಲಿಲ್ಲ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ:ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್​ ಅಮಾನತು

Last Updated : Jan 21, 2023, 1:09 PM IST

ABOUT THE AUTHOR

...view details