ನವದೆಹಲಿ:ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯ 'ದಹಿ' ಪದ ಬಳಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಎಚ್ಚೆತ್ತುಕೊಂಡಿದೆ. ಗುರುವಾರ ತನ್ನ ಮಾರ್ಗಸೂಚಿಯನ್ನು ಪ್ರಾಧಿಕಾರ ಪರಿಷ್ಕರಿಸಿದ್ದು, ಮೊಸರು ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಪ್ರಾದೇಶಿಕ ಹೆಸರುಗಳನ್ನು ಬಳಸಲು ಅನುಮತಿಸಿದೆ.
ಇದೀಗ ಲೇಬಲ್‌ನಲ್ಲಿನ ಬ್ರಾಕೆಟ್‌ಗಳಲ್ಲಿ ಯಾವುದೇ ಇತರ ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರಿನ ಜೊತೆಗೆ 'Curd' ಪದವನ್ನು ಬಳಸಲು ಅನುಮತಿ ನೀಡಲಾಗಿದೆ. ಉದಾಹರಣೆಗೆ, 'Curd (ದಹಿ)' ಅಥವಾ 'Curd (ಮೊಸರು), 'Curd (ಝಾಮುತ್ದೌಡ್)', 'Curd (ತಾಯಿರ್)', 'Curd (ಪೆರುಗು)' ಅನ್ನು ಬಳಸಬಹುದು ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟನೆ ನೀಡಿದೆ.
ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಇಂಗ್ಲಿಷ್ನ ಕರ್ಡ್ (Curd) ಪದ ಬಳಕೆ ಜೊತೆಗೆ ಹಿಂದಿಯ ದಹಿ (Dahi) ಪದ ಬಳಕೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆ) ನಿಯಮಗಳು 2011ರಡಿ ಪ್ಯಾಕೆಟ್ ಮೇಲಿನ 'ದಹಿ' ಪದ ಬಳಕೆ ಮತ್ತು ಅಚ್ಚು ನಿರ್ಧಾರವನ್ನು ಹಿಂಪಡೆಯಲಾಗಿದೆ.
ಹೆಚ್ಡಿಕೆ ಟ್ವಿಟ್: 'ನಮ್ಮ ನಂದಿನಿಯ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಪದ ಮುದ್ರಣ ಮಾಡುವ ಕನ್ನಡ ವಿರೋಧಿ ನಿರ್ಧಾರವನ್ನು ಕೇಂದ್ರ ಆಹಾರ ಸುರಕ್ಷತಾ, ಗುಣಮಟ್ಟ ಪ್ರಾಧಿಕಾರ (FSSAI) ವಾಪಸ್ ಪಡೆದಿರುವುದು ಸ್ವಾಗತಾರ್ಹ. ಆದರೆ, ಇಂಥ ವಿವೇಕರಹಿತ ಆದೇಶ ಹೊರಡಿಸಿದ್ದ ಪ್ರಾಧಿಕಾರ ಸೂಕ್ಷ್ಮ ವಿಚಾರಗಳಲ್ಲಿ ಮೂಗು ತೂರಿಸದೆ ಇರಲಿ' ಎಂದು ಹೆಚ್ಡಿಕೆ ಟ್ವಿಟ್ ಮಾಡಿದ್ದಾರೆ.
'ದಹಿ' ಪದ ಖಂಡಿಸಿದ್ದ ಹೆಚ್ಡಿಕೆ: ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು ಮತ್ತು ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ಗೆ ಆದೇಶ ನೀಡಿರುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಖಂಡಿಸಿದ್ದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಹೆಚ್ಡಿಕೆ, ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಆರಂಭವಾ ಎಂದು ಕಿಡಿಕಾರಿದ್ದರು.
ಅಲ್ಲದೇ, ಶಾ ಅವರ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದರು. ನಾನೂ ವಿರೋಧಿಸಿದ್ದೆ. ಆಮೇಲೆ ಸುಮ್ಮನಾಗಿದ್ದ ಬಿಜೆಪಿ ಸರ್ಕಾರ ಈಗ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ ದಹಿ ಸೇರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?. ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು ಎಂದು ಹೆಚ್ಡಿಕೆ ಟೀಕಿಸಿದ್ದರು.
ತಮಿಳುನಾಡಿನಲ್ಲೂ ಖಂಡನೆ: ಎಫ್‌ಎಸ್‌ಎಸ್‌ಎಐ ನಿರ್ದೇಶನದಂತೆ ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಡೈರಿ ಉತ್ಪನ್ನಗಳ 'ದಹಿ' ಹಿಂದಿ ಪದ ಬಳಕೆ ಬಗ್ಗೆ ಖಂಡನೆ ವ್ಯಕ್ತವಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಕ್ರಮವನ್ನು ಹಿಂದಿ ಹೇರಿಕೆ ಪ್ರಯತ್ನ ಎಂದು ಟೀಕಿಸಿದ್ದರು.
ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ, ಮೊಸರು ಪ್ಯಾಕೆಟ್‌ಗೂ ಹಿಂದಿಯಲ್ಲಿ ಲೇಬಲ್ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಹಿಂದಿ ಹೇರಿಕೆಯ ನಿರ್ಲಜ್ಜ ಒತ್ತಾಯ ಬಂದಿದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕೆಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು. ಮತ್ತೊಂದೆಡೆ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕೂಡ, ಎಫ್‌ಎಸ್‌ಎಸ್‌ಎಐನ ಈ ಅಧಿಸೂಚನೆಯು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ಕೇಂದ್ರದ ನೀತಿಗೆ ಸರಿ ಹೊಂದುವುದಿಲ್ಲ ಎಂದು ವಿರೋಧಿಸಿದ್ದರು.
ಇದನ್ನೂ ಓದಿ:ನಂದಿನಿ ಮೊಸರು ಪಾಕೆಟ್ ಮೇಲೆ 'ದಹಿ' ಪದ: ಹಿಂದಿ ಹೇರಿಕೆಯ ಅಹಂ ಬೇಡವೆಂದ ಹೆಚ್ಡಿಕೆ