ವಿಶ್ವಸಂಸ್ಥೆ:ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿ, ಉಕ್ರೇನ್ ಸಂಘರ್ಷ, ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಿದರು. ಇದರ ಜೊತೆಗೆ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿನ ವಿಷಯಗಳ ಕುರಿತು ಗುಟೆರಸ್ ಜೊತೆ ಚರ್ಚೆ ನಡೆಸಲಾಯಿತು.
ಮಂಗಳವಾರ ನ್ಯೂಯಾರ್ಕ್‌ಗೆ ಆಗಮಿಸಿದ್ದ ಶ್ರಿಂಗ್ಲಾ ಬುಧವಾರ ಯುಎಇ ಕೌನ್ಸಿಲ್ ಪ್ರೆಸಿಡೆನ್ಸಿಯ ಅಡಿ ನಡೆದ ವಿಶ್ವಸಂಸ್ಥೆ ಮತ್ತು ಅರಬ್ ಸ್ಟೇಟ್ಸ್ ನಡುವಿನ ಸಹಕಾರದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಚರ್ಚೆಯ ಅಧ್ಯಕ್ಷತೆಯನ್ನು ಯುಎಇ ಸಚಿವರಾದ ಖಲೀಫಾ ಶಾಹೀನ್ ಅಲ್ಮಾರಾರ್ ವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯ ನಂತರ ಶ್ರಿಂಗ್ಲಾ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುಟೆರೆಸ್ ಅವರನ್ನು ಭೇಟಿಯಾದರು.
ಉಕ್ರೇನ್, ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಈ ವೇಳೆ ಚರ್ಚೆ ನಡೆಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಗುಟೆರಸ್ ಅವರೊಂದಿಗೆ ಶ್ರಿಂಗ್ಲಾ ಅವರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉಕ್ರೇನ್, ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್ ಬಿಕ್ಕಟ್ಟಿನ ವಿಚಾರದಲ್ಲಿ ಭಾರತದ ಪಾತ್ರ ಅತ್ಯಂತ ದೊಡ್ಡದು. ಈ ದೇಶಗಳ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವಲ್ಲಿ ಭಾರತದಂತಹ ರಾಷ್ಟ್ರಗಳು ಪ್ರಮುಖಪಾತ್ರ ವಹಿಸುತ್ತವೆ ಎಂದು ಗುಟೆರಸ್ ಈ ವೇಳೆ ಹೇಳಿದ್ದಾರೆ.
ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ದೂರವಾಣಿ ಸಂಭಾಷಣೆಗಳನ್ನು ನಡೆಸಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ಸಂಘಟಿತ ಪ್ರಯತ್ನ ನಡೆಸುವಂತೆ ಕರೆ ನೀಡಿದ್ದಾರೆ. ಈ ಯುದ್ಧವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ಪ್ರಯತ್ನಗಳ ಕುರಿತು ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಸ್ರೇಲ್ ಮತ್ತು ಟರ್ಕಿ ಸೇರಿದಂತೆ ಹಲವಾರು ದೇಶಗಳೊಂದಿಗೆ ನಾವು ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಕಳೆದ ವಾರ ಗುಟೆರಸ್ ಹೇಳಿದ್ದರು.
ಬಿಕ್ಕಟ್ಟು ಮುಂದುವರಿದರೆ ಕೆಲವು ದೇಶಗಳು ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತೈಲ ಬೆಲೆಗಳು ಮತ್ತು ಆಹಾರ ಭದ್ರತೆಯ ಮೇಲೆ ಯುದ್ಧ ಪರಿಣಾಮ ಬೀರುತ್ತದೆ ಎಂದು ಗುಟೆರಸ್ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಭಾರತ ಎರಡೂ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಗುಟೆರಸ್ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತು, ವಿಶ್ವಸಂಸ್ಥೆಯ ಏಜೆನ್ಸಿಗಳನ್ನು ಬಳಸಿಕೊಂಡು ಯುದ್ಧ ಪೀಡಿತ ದೇಶದ ಜನರಿಗೆ ಮಾನವೀಯ ನೆರವು ನೀಡಲು ಮತ್ತು ಔಷಧಿಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೊದಲ ದೇಶಗಳಲ್ಲಿ ಭಾರತವು ಒಂದು ಹೆಜ್ಜೆ ಮುಂದಿದೆ ಎಂದು ಗುಟೆರಸ್ ಹೇಳಿದ್ದಾರೆ.
ಮ್ಯಾನ್ಮಾರ್‌ನ ನೆರೆಯ ರಾಷ್ಟ್ರವಾಗಿ ಪ್ರಮುಖ ಪಾತ್ರವನ್ನು ವಹಿಸುವ ಭಾರತದೊಂದಿಗೆ ಸಂಪರ್ಕದಲ್ಲಿರಲು ಗುಟೆರೆಸ್ ತನ್ನ ವಿಶೇಷ ರಾಯಭಾರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್ ಮತ್ತು ಭದ್ರತಾ ಮಂಡಳಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಒಮ್ಮತವನ್ನು ಪಡೆಯುವಲ್ಲಿ ಭಾರತದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.