ಮುಂಬೈ:ಬಾಲಿವುಡ್, ಕನ್ನಡ, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ನೂರಾರು ಹಾಡು ಹಾಡುವ ಮೂಲಕ ಖ್ಯಾತಿಗಳಿಸಿದ್ದ ಕೃಷ್ಣಕುಮಾರ್ ಕುನ್ನತ್ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ತದನಂತರ ಹೋಟೆಲ್ ತಲುಪಿದಾಗ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದು, ವಿಧಿವಶರಾಗಿದ್ದಾರೆ.
ಇವರ ದಿಢೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಗಾಯಕರಾದ ಶ್ರೇಯಾ ಘೋಷಾಲ್,ಮೋಹಿತ್ ಚೌಹಾಣ್,ಅರ್ಮಾನ್ ಮಲಿಕ್ ಸಹ ಟ್ವೀಟ್ ಮೂಲಕ ಕಂಬನಿ ಮಿಡಿದ್ದಿದ್ದಾರೆ.
ಕೆಕೆ ಬಹಳ ಪ್ರತಿಭಾವಂತ ಬಹುಮುಖ ಗಾಯಕರಾಗಿದ್ದರು. ಅವರ ಅಕಾಲಿಕ ನಿಧನ ಅತ್ಯಂತ ದುಃಖಕರ ಮತ್ತು ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಪ್ರದರ್ಶನ ನೀಡುತ್ತಿದ್ದಾಗಲೇ ಅನಾರೋಗ್ಯಕ್ಕೊಳಗಾಗಿ ಕೆಕೆ ನಿಧನರಾಗಿರುವ ಸುದ್ದಿ ಕೇಳುತ್ತಿರುವುದು ದುರಂತದ ವಿಚಾರ. ಜೀವನ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.