ನವದೆಹಲಿ:ರ್ಯಾಪರ್ಗಳ ಮೇಲೆ ಬಂದೂಕು ಹಿಂಸಾಚಾರ ಹೊಸದೇನಲ್ಲ ಮತ್ತು ಪಂಜಾಬಿ ರ‍್ಯಾಪರ್, ರಾಜಕಾರಣಿ ಸಿಧು ಮೂಸ್ ವಾಲಾ ಅವರ ಮೇಲೆ ನಡೆದ ಇತ್ತೀಚಿನ ಗುಂಡಿನ ದಾಳಿಯು ಹಿಪ್-ಹಾಪ್ ಸಮುದಾಯದ ಮೇಲೆ ಈ ಹಿಂದೆ ನಡೆದ ಕೆಲವು ಘಟನೆಗಳನ್ನು ನೆನಪಿಸಿದೆ. ಈ ಗುಂಡಿನ ದಾಳಿಗೆ ಬಲಿಯಾದ ಗಾಯಕರು ಯಾರ್ಯಾರು ಎಂಬ ಬಗ್ಗೆ ತಿಳಿಯೋಣ.
1987 ರಲ್ಲಿ ಕೊಲ್ಲಲ್ಪಟ್ಟ ಮೊದಲ ಹಿಪ್-ಹಾಪ್ ಕಲಾವಿದ ಸ್ಕಾಟ್ ಲಾ ರಾಕ್ ಆಗಿದ್ದಾನೆ. ಆತ ಈಸ್ಟ್ ಕೋಸ್ಟ್ ಹಿಪ್-ಹಾಪ್ ಗುಂಪಿನ ಬೂಗೀ ಡೌನ್ ಪ್ರೊಡಕ್ಷನ್ಸ್‌ನ ಸ್ಥಾಪಕ ಸದಸ್ಯರಾಗಿದ್ದ. ಕಳೆದ ವರ್ಷವಷ್ಟೇ ಕನಿಷ್ಠ 20 ಹಾಡುಗಾರರನ್ನು ಹತ್ಯೆ ಮಾಡಲಾಗಿದೆ. ಅದರಲ್ಲಿ ಕೆಲವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಪಡೆದ ಕಲಾವಿದರಾಗಿದ್ದವರೂ ಇದ್ದಾರೆ.
ಸಿಧು ಮೂಸ್ ವಾಲಾ: ಮೂಸ್ ವಾಲಾ ಅವರನ್ನು ಮೇ 29, 2022 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ನಡೆದಾಗ ಅವರು ತಮ್ಮ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಕೊಲೆಯ ಹೊಣೆಯನ್ನು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ ಎಂದು ವರದಿಯಾಗಿದೆ.
ತುಪಕ್ ಶಕುರ್:1996 ರಲ್ಲಿ ತನ್ನ ವಾಹನವು ಸಿಗ್ನಲ್‌ನಲ್ಲಿದ್ದಾಗ 25 ನೇ ವಯಸ್ಸಿನಲ್ಲಿ ಟುಪಕ್ ಮೇಲೆ ಗುಂಡು ಹಾರಿಸಲಾಗಿತ್ತು. ಈತನ ಮೇಲೆ ದುಷ್ಕರ್ಮಿಗಳು 4 ಬಾರಿ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಗಾಯಕ ಬಳಿಕ ಕೊನೆಯುಸಿರೆಳೆದರು.