ವಾರಾಣಸಿ:ಜ್ಞಾನವಾಪಿ ಶೃಂಗಾರ ಗೌರಿ ವಿವಾದದ ನಡುವೆಯೇ ಎರಡನೇ ಶುಕ್ರವಾರ ಶಾಂತಿಯುತವಾಗಿ ನಮಾಜ್ ಮಾಡಲಾಯಿತು. ಮಸೀದಿ ಆವರಣದಲ್ಲಿ ಶಿವಲಿಂಗ ದಂತಹ ರಚನೆ ಕಂಡು ಬಂದ ಬಳಿಕ ವಾರಾಣಸಿ ಸಿವಿಲ್ ನ್ಯಾಯಾಲಯವು ಮಸೀದಿ ಆವರಣದಲ್ಲಿರುವ ವುಜುಖಾನಾ ಮತ್ತು ಇಸ್ತಿಂಜಖಾನಾ (ಶೌಚಾಲಯ) ಗಳಿಗೆ ಬೀಗ ಹಾಕುವಂತೆ ಆದೇಶ ನೀಡಿತ್ತು. ಆದರೆ ಆಡಳಿತ ಮಂಡಳಿ ಆವರಣದೊಳಗೆ ವುಜುಗಾಗಿ ಪರ್ಯಾಯ ಸೌಲಭ್ಯದ ವ್ಯವಸ್ಥೆ ಮಾಡಿತ್ತು.
ಪ್ರಕರಣದ ಗಂಭೀರತೆ ಅರಿತ ಭದ್ರತಾ ಸಿಬ್ಬಂದಿ ನಮಾಜ್ಗಾಗಿ ಬಂದವರನ್ನು ಮತ್ತು ಮಾಧ್ಯಮದವರನ್ನು ಗೇಟ್ ಸಂಖ್ಯೆ 4 ರ ಮುಂದೆ ನಿಲ್ಲಿಸಲಾಯಿತು. ಬಳಿಕ ನಮಾಜ್ಗಾಗಿ ಸರತಿ ಸಾಲಿನಲ್ಲಿ ಒಬ್ಬೊಬ್ಬರನ್ನು ಒಳಗೆ ಕಳುಹಿಸಲಾಯಿತು. ಇದಕ್ಕೂ ಮೊದಲು, ಅಂಜುಮನ್ ಇಂತಜಾಮಿಯಾ ಮಸಾಜಿದ್ ಸಮಿತಿಯು ಮುಸ್ಲಿಮರು ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡುವ ಬದಲು ತಮ್ಮ ಮನೆಗಳಿಗೆ ಸಮೀಪ ಇರುವ ಮಸೀದಿಗಳಲ್ಲಿ ಶುಕ್ರವಾರ ನಮಾಜ್ ಮಾಡುವಂತೆ ಒತ್ತಾಯಿಸಿತ್ತು.