ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸಾಮಾನ್ಯ ತಾಪಮಾನ ಕನಿಷ್ಠ ಮಟ್ಟಕ್ಕಿಳಿದಿದ್ದು, ಜನರು ಚಳಿಯಿಂದ ನಲುಗಿದ್ದಾರೆ. ರಾತ್ರಿಯಂದು ಮೈಕೊರೆಯುವ ಚಳಿ ಆವರಿಸುತ್ತಿದ್ದು, ಇದರಿಂದ ಜನರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗುಲ್ಮರ್ಗ್ನಲ್ಲಿ ಹೊಸ ಹಿಮ ಮಳೆ ಆವರಿಸಿದೆ.
ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿಯಾಗಿರುವ ಕಾಶ್ಮೀರದಲ್ಲಿ ಸೋಮವಾರ ರಾತ್ರಿ 3.7 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಅತ್ಯಂತ ಕಡಿಮೆ ತಾಪಮಾನವಾಗಿದೆ. ಈ ಹಿಂದಿನ ರಾತ್ರಿಗಳಲ್ಲಿ ಕಾಶ್ಮೀರದ ಜನರು 4.2 ತಾಪಮಾನದಲ್ಲಿ ನಡುಗಿದ್ದರೂ ಇದೀಗ ಒಂದೇ ರಾತ್ರಿಯಲ್ಲಿ 0.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿದಿದೆ ಎಂದು ಮಾಹಿತಿ ನೀಡಲಾಗಿದೆ.
ಬುರಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನ ಪ್ರಖ್ಯಾತ ಸ್ಕೈ ರೆಸಾರ್ಟ್ನಲ್ಲಿ ಕಡಿಮೆ ತಾಪಮಾನ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಲ್ಲಿ ಕೂಡ ಹಿಂದಿನ ದಿನ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸೋಮವಾರ 1.4 ಡಿಗ್ರಿ ಸೆಲ್ಸಿಯಸ್ ಕುಸಿದಿತ್ತು. ವಾರ್ಷಿಕ ಅಮರನಾಥ್ ಯಾತ್ರೆ ನಡೆಯುವ ಅನಂತ್ನಾಗ್ ಜಿಲ್ಲೆಯ ಪಹಲ್ಗಮ್ನಲ್ಲಿ ಕೂಡ 6.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೊಕೆರ್ನಾಗ್ನಲ್ಲಿ 3.1 ಡಿಗ್ರಿ ಸೆಲ್ಸಿಯಸ್, ಕುಪ್ವಂನಲ್ಲಿ 3.8 ಡಿಗ್ರಿ ದಾಖಲಾಗಿದೆ.
ಸದ್ಯ ಚಳಿಯಿಂದ ನಡುಗುತ್ತಿರುವ ಕಣಿವೆ ರಾಜ್ಯ ಮುಂದಿನ ಕೆಲವರು ದಿನದಲ್ಲಿ ಒಣ ತಾಪಮಾನಕ್ಕೆ ಸಾಕ್ಷ್ಯಿ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸ್ತುತ ತಾಪಮಾನದ ದಿಢೀರ್ ಇಳಿಕೆಯು ನೀರನ್ನು ಕೂಡ ಘನೀಕರಿಸಿದೆ. ಇದರಿಂದಾಗಿ ಪೈಪ್ಗಳ ಮೂಲಕ ನೀರು ಸರಬರಾಜು ಕೂಡ ಕೆಲವು ಪ್ರದೇಶದಲ್ಲಿ ವ್ಯತ್ಯಯವಾಗಿದೆ. ಅಷ್ಟೇ ಅಲ್ಲದೇ, ತಾಪಮಾನದ ಇಳಿಕೆ ಮಕ್ಕಳು ಮತ್ತು ಹಿರಿಯ ನಾಗರೀಕರಲ್ಲಿ ಉಸಿರಾಟ ಸಮಸ್ಯೆಯಂತಹ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಕಾಶ್ಮೀರದ ಅನೇಕ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಕೂಡ ವ್ಯತ್ಯಯವಾಗಿದೆ.
ಶನಿವಾರ ಮಧ್ಯಾಹ್ನದಿಂದ ಜಮ್ಮು ಮತ್ತು ಕಾಶ್ಮೀರದ ಕೆಲವು ಸ್ಥಳಗಳಲ್ಲಿ ಲಘು ಮಳೆ ಅಥವಾ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ದುರ್ಬಲ ಪಾಶ್ಚಿಮಾತ್ಯ ಪ್ರಕ್ಷುಬ್ಧತೆಯು ಜಮ್ಮು ಮತ್ತು ಕಾಶ್ಮೀರದ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮ ಕೆಲವು ಸ್ಥಳಗಳಲ್ಲಿ, ವಿಶೇಷವಾಗಿ ಪ್ರದೇಶದ ಮೇಲ್ಭಾಗದಲ್ಲಿ ಲಘು ಮಳೆ ಅಥವಾ ಹಿಮಪಾತವು ಸಂಭವಿಸಬಹುದು.
ಗುಲ್ಮರ್ಗ್, ಸೊನ್ಮರ್ಗ್, ಗುರೆಜ್ ಮತ್ತು ಮುಘಲ್ ರಸ್ತೆಗಳಲ್ಲಿ ಹಗುರ ಹಿಮ ಮಳೆಯಾಗಬಹುದು. ಇದರ ನಡುವೆ ಜಮ್ಮುವಿನ ಅನೇಕ ಪ್ರಾಂತ್ಯಗಳಲ್ಲಿ ತಾಪಮಾನ ಶೂನ್ಯ ದಾಖಲಾಗಿದೆ. ಬನಿಹಲ್ನಲ್ಲಿ ಮೈನಸ್ 1.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಲ್ಲಿನ ಜನರು ಅತಿ ಹೆಚ್ಚಿನ ಚಳಿಯನ್ನು ಅನುಭವಿಸುತ್ತಿದ್ದಾರೆ. (ಪಿಟಿಐ)
ಇದನ್ನೂ ಓದಿ: ಶಹದೋಲ್ನಲ್ಲಿ ಹಳಿತಪ್ಪಿದ ಆರು ರೈಲ್ವೆ ಬೋಗಿಗಳು.. ಪರದಾಡಿದ ಪ್ರಯಾಣಿಕರು