ಹೈದರಾಬಾದ್: ಸುಭಾಷ್ ಚಂದ್ರ ಬೋಸ್ ಹೆಸರನ್ನು ಕೇಳಿದಾಕ್ಷಣ ಭಾರತೀಯರ ರೋಮಗಳೆಲ್ಲಾ ಎದ್ದು ನಿಲ್ಲುತ್ತವೆ. ಕಾರಣ ಅವರ ಹೋರಾಟದ ಶೈಲಿ. ಓರ್ವ ನಾಯಕನಿಗೆ ಏನೆಲ್ಲಾ ಗುಣಗಳಿರಬೇಕಿತ್ತೋ ಅವೆಲ್ಲಾ ಬೋಸ್ರಿಗೆ ಇದ್ದವು. ಆ ಕಾರಣಕ್ಕಾಗಿ ಬೋಸರು ಇಂದೂ ಸಹ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಇಂದು ಅವರ 125ನೇ ಜನ್ಮದಿನೋತ್ಸವ. ಬನ್ನಿ ಅವರ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡು ಬರೋಣ.
ಬೋಸರು ಜನ್ಮ ತಳೆದಿದ್ದು ಜನವರಿ 23, 1897ರಂದು. ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಇವರೂ ಪ್ರಮುಖರು. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗ್ಗೆ ಅಹಿಂಸಾ ಮಾರ್ಗದಲ್ಲಿದ್ದರು. ಆದರೆ, ಬೋಸ್ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ನೇತಾಜಿ ಒಡಿಶಾದ ಕಟಕ್‌ನಲ್ಲಿ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ ಅವರಿಗೆ 14 ಜನ ಮಕ್ಕಳಲ್ಲಿ 9ನೇ ಮಗನಾಗಿ ಜನಿಸುತ್ತಾರೆ. ಕಟಕ್‌ನಲ್ಲಿ ರಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿದ ಅವರು, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರಿಂದ ಪ್ರೇರಣೆ ಪಡೆದು ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳಿಂದ ಪ್ರಭಾವಿತರಾಗುತ್ತಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
1919 ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ 1919 ರ ಸೆಪ್ಟೆಂಬರ್ 15 ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸುತ್ತಾರೆ. 1920 ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಐ.ಸಿ.ಎಸ್ ಪದವಿ ಪಡೆದ ಅವರು ವಿದೇಶಿ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು 1921ರ ಎಪ್ರಿಲ್22 ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು.
ಕಾಂಗ್ರೆಸ್ ಸ್ವಯಂಸೇವಕರೊಂದಿಗೆ ಸುಭಾಸ್ ಚಂದ್ರ ಬೋಸ್, 1929 ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನ:
20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921ರ ಜುಲೈ 16 ರಂದು ಮುಂಬೈಗೆ ಮರಳಿದ ಬೋಸ್, ಅಂದೇ ಗಾಂಧೀಜಿಯನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಇದಾದ ನಂತರ 1921 ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡುವ ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕುತ್ತಾರೆ.
ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ಕಿಚ್ಚಿಗೆ ಹೆಚ್ಚಿನ ಶಕ್ತಿ ತುಂಬಿದ್ದರು. ಈ ಕ್ರಾಂತಿಪಥದಲ್ಲಿ ಅವರು ಎಂದೂ ರಾಜಿಮಾಡಿಕೊಂಡ ಉದಾಹರಣೆ ಇಲ್ಲ. ಈ ಕಾರಣಕ್ಕಾಗೆ ಭಾರತದ ಮಂದಗಾಮಿಗಳು ಇವರನ್ನು ಹೀಯಾಳಿಸಿದ್ದರು. ಅಷ್ಟೇ ಅಲ್ಲಾ ಮಹಾತ್ಮ ಗಾಂಧಿ ಸಹ ಇವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ, ಇದ್ಯಾವುದಕ್ಕೂ ಬೋಸ್ ತಲೆಕೆಡಿಸಿಕೊಳ್ಳದೆ ಕೆಂಪು ಮುಖದವರ ಮುಕ್ತಿಗಾಗಿ ಹಸಿದ ಹೆಬ್ಬುಲಿಯಂತೆ ತಮ್ಮ ಕಾಯಕದಲ್ಲಿ ತಲ್ಲೀನರಾಗಿದ್ದರು.
1920 ರ ದಶಕದ ಉತ್ತರಾರ್ಧದಲ್ಲಿ ಬೋಸ್ ಕೋಲ್ಕತ್ತದಲ್ಲಿನ ಅವರ ನಿವಾಸದಲ್ಲಿ. 1938ರಲ್ಲಿ ಭಾರತದ ವಿಭಜನೆ, ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದರು. ಆದರೆ ಅದು ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮ ದೇಶ ಹೋಳಾಯಿತು. ಬೋಸ್‌ರ ದೂರಗಾಮಿ ಚಿಂತನೆಗೆ ಬೆಲೆ ನೀಡದ ಹಿನ್ನೆಲೆ ಅವರು ಕಾಂಗ್ರೆಸ್‌ನಿಂದ ಹೊರಬಂದರು.
ಸ್ವರಾಜ್ಯಪಕ್ಷ ಸ್ಥಾಪನೆ:
ಕಾಂಗ್ರೆಸ್‌ನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್ ಸಹಾಯದಿಂದ ಸ್ವರಾಜ್ಯಪಕ್ಷ ಸ್ಥಾಪನೆ ಮಾಡಿದ ಅವರು, 1923ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ಫಾರ್ವರ್ಡ್ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದರು.
ಬೋಸರ ಶ್ರೇಷ್ಠ ಘೋಷಣೆ:'ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ' ಎಂದು ಯಾವಾಗಲು ತಮ್ಮ ಪಡೆಯನ್ನು ಬೋಸರು ಹುರಿದುಂಬಿಸುತ್ತಿದ್ದರು. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ, ಅದು ನಾವು ಪಡೆದುಕೊಳ್ಳಬೇಕಾದದ್ದು ಎಂದು ತಿಳಿಸಿ ಹೇಳುತ್ತಿದ್ದರು.
1926 ರಲ್ಲಿ ಪ್ರೇಗ್‌ನಲ್ಲಿ ಇಂಡಿಯಾ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಬೋಸ್. ಬೋಸ್‌ರ ಸಾವು:ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ. ಆದರೆ, ಈವರೆಗೂ ಅವರ ಸಾವಿನ ಬಗ್ಗೆ ಸ್ಪಷ್ಟನೆ ಇಲ್ಲ. ಇನ್ನೂ ಕೂಡ ಸ್ಪಷ್ಟವಾಗಿ ತಿಳಿಯದ ಮಾಹಿತಿಯಾಗಿಯೇ ಉಳಿದುಕೊಂಡಿದೆ.
ಬೋಸ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಹಾರಾಟ ಆರಂಭಿಸಿದ ತಕ್ಷಣ ನೆಲಕ್ಕೆ ಅಪ್ಪಳಿಸಿತು. ಆಗ ಬೋಸ್ ಅವರು ತೀವ್ರ ಗಾಯಗೊಂಡರು. ಮಧ್ಯಾಹ್ನ 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ಬೋಸ್ ಅವರನ್ನು ದಾಖಲಿಸಲಾಯಿತು. ಬಳಿಕ 7 ಗಂಟೆಗೆ ಅವರು ಮೃತಪಟ್ಟರು. ಆಗಸ್ಟ್ 22ರಂದು ಬೋಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.
ಬೋಸ್ ಬಗ್ಗೆ ಗಾಂಧೀಜಿ ಹೇಳಿಕೆ:ತಮ್ಮ ತ್ಯಾಗದ ಸಾಮರ್ಥ್ಯ ಅವರಿಗೆ ಸದಾ ತಿಳಿದಿತ್ತು. ಅವರ ವ್ಯವಹಾರ ಚಾತುರ್ಯ, ಸೇನೆಯನ್ನು ಮುನ್ನಡೆಸುವ ತಾಕತ್ತು ಮತ್ತು ಸಂಘಟನಾ ಸಾಮರ್ಥ್ಯ ಅವರು ದೇಶ ತೊರೆದು ಹೋದ ಮೇಲಷ್ಟೇ ನನಗೆ ತಿಳಿಯಿತು ಎಂದು ಹೇಳಿದ್ದರು.
ಬೋಸ್ಗೆ ಕೇಂದ್ರ ಸರ್ಕಾರದಿಂದ ಗೌರವ:ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅವರ ಜನ್ಮದಿನವನ್ನು 'ಪರಾಕ್ರಮ ದಿವಸ'ವನ್ನಾಗಿ ಆಚರಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ.
ಇನ್ನು ಕೇಂದ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. ವರ್ಷವಿಡೀ ನೇತಾಜಿಯ ಜನ್ಮ ಜಯಂತಿಯ ಕಾರ್ಯಕ್ರಮಗಳನ್ನು ಎರಡೂ ಸರ್ಕಾರಗಳು ಆಯೋಜಿಸಿವೆ.
ಆದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು 'ಪರಾಕ್ರಮ ದಿವಸ'ವನ್ನಾಗಿ ಆಚರಿಸುವ ಕೇಂದ್ರ ಸರ್ಕಾರದ ನಿರ್ಣಯವನ್ನು, ಖುದ್ದು ಬೋಸ್ ಅವರೇ ಸ್ಥಾಪಿಸಿದ ಫಾರ್ವರ್ಡ್ ಬ್ಲಾಕ್ ಪಕ್ಷ ವಿರೋಧ ಮಾಡಿದೆ. ಈ ಸಂಬಂಧ ಫಾರ್ವರ್ಡ್ ಬ್ಲಾಕ್ ಪಕ್ಷದ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ನರೇನ್ ಚಟರ್ಜಿ ಮಾತನಾಡಿ, ಎಡಪಕ್ಷಗಳ ಸಮ್ಮಿಶ್ರ ಸರ್ಕಾರ ಇದ್ದಾಗ ನಿರ್ಣಯಿಸಿದ್ದ 'ದೇಶಪ್ರೇಮ್ ದಿವಸ್'(ದೇಶ ಪ್ರೇಮದ ದಿನ)ವನ್ನೇ ಬೋಸ್ ಅವರ ಜನ್ಮ ಜಯಂತಿಯನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದೆ.
ಸ್ವಾತಂತ್ರ್ಯ ಹೋರಾಟಗಾರರ ಜೊತೆ ಬೋಸ್ ಇಂಡಿಯಾ ಗೇಟ್ ಬಳಿ ಪ್ರತಿಮೆ:ಇನ್ನು ಇಂಡಿಯಾ ಗೇಟ್‌ನಲ್ಲಿ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ದೇಶ ಸ್ವಾಗತ ಮಾಡಿದೆ. ಈ ಮೂಲಕ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರರ ಭವ್ಯ ಪ್ರತಿಮೆ ಅನಾವರಣಗೊಳ್ಳಲಿದೆ.
ಇನ್ನು ಪ್ರಧಾನಿ ಅವರ ನಿರ್ಧಾರವನ್ನು ಸ್ವಾಗತಿಸಿದ ನೇತಾಜಿ ಮಗಳ ಅನಿತಾ ಬೋಸ್, ನೇತಾಜಿ ಅವರ ಹೋರಾಟಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೂಕ್ತ ಗೌರವ ಸಲ್ಲಿಸಿದೆ ಎಂದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ