ನವದೆಹಲಿ :ಈಗ ಎಲ್ಲರ ಬಳಿ ಬೈಕ್ ಅಥವಾ ಕಾರುಗಳು ಇದ್ದೇ ಇರುತ್ತವೆ. ತೈಲ ಬೆಲೆಗಳು ಏರುತ್ತಿರುವ ಈ ವೇಳೆ ಅವುಗಳ ನಿರ್ವಹಣೆ ಕಷ್ಟವಾಗಿದೆ. ಪೆಟ್ರೋಲ್ ಬಂಕ್ಗಳ ಬಳಿ ತೆರಳಿದರೆ ಜೇಬು ಖಾಲಿಯಾಗೋದಂತೂ ಗ್ಯಾರಂಟಿ. ಆದರೆ, ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಮಾತ್ರ ದುಬಾರಿ. ಆದರೆ, ಕೆಲ ಸೇವೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಕೆಲವೊಮ್ಮೆ ಇದರ ಬಗ್ಗೆ ಅರಿವಿರದಿದ್ದರೆ, ಅವುಗಳಿಗೂ ಹಣ ನೀಡಬೇಕಾಗುತ್ತದೆ.
ಯಾವುದೇ ಒಂದು ಪೆಟ್ರೋಲ್ ಬಂಕ್ಗೆ ಲೈಸೆನ್ಸ್ ನೀಡುವ ಮೊದಲು ಕೆಲ ಷರತ್ತುಗಳನ್ನು ಹಾಕಲಾಗುತ್ತದೆ. ಈ ಹಕ್ಕುಗಳನ್ನು ಪಡೆಯುವುದು ಸಾಮಾನ್ಯ ನಾಗರಿಕರ ಹಕ್ಕು ಕೂಡ ಹೌದು. ಒಂದು ಈ ಸೇವೆಗಳನ್ನು ಒದಗಿಸದಿದ್ದರೆ, ಅಂತಹ ಪೆಟ್ರೋಲ್ ಬಂಕ್ಗಳ ಲೈಸೆನ್ಸ್ ಅನ್ನು ರದ್ದು ಮಾಡಬಹುದು ಎಂಬ ಷರತ್ತೂ ಕೂಡ ಇದೆ. ಪೆಟ್ರೋಲ್ ಬಂಕ್ ನೀಡಲೇಬೇಕಾದ ಉಚಿತ ಸೌಲಭ್ಯಗಳ ಕುರಿತು ನೋಡೋಣ ಬನ್ನಿ..
1. ಟೈರ್‌ಗಳಿಗೆ ಉಚಿತ ಗಾಳಿ :ನಾವು ಬೈಕ್ ಅಥವಾ ಕಾರುಗಳಲ್ಲಿ ಹೊರಗೆ ಹೋಗುವಾಗ ಟೈರ್ಗಳಲ್ಲಿ ಅಗತ್ಯವಾದಷ್ಟು ಗಾಳಿ ಇರಬೇಕಾದುದು ಅನಿವಾರ್ಯ. ನಾವು ಬೇರೆ ಶಾಪ್ಗಳಲ್ಲಿ ಟೈರ್‌ಗಳಿಗೆ ಗಾಳಿಯನ್ನು ತುಂಬಿಸಿಕೊಂಡರೆ, ಹಣ ನೀಡಬೇಕಾಗುತ್ತದೆ. ಆದರೆ, ಪೆಟ್ರೋಲ್ ಬಂಕ್ಗಳಲ್ಲಿ ಗಾಳಿಯನ್ನು ಉಚಿತವಾಗಿ ಟೈರ್‌ಗಳಿಗೆ ತುಂಬಿಸಿಕೊಳ್ಳಬಹುದು. ಇದಕ್ಕಾಗಿಯೇ ಅಲ್ಲೊಬ್ಬ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ನೀವು ಆ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ತುಂಬಿಸಿಕೊಳ್ಳದಿದ್ದರೂ, ನೀವು ಈ ಉಚಿತ ಸೇವೆ ಪಡೆಯಬಹುದು.
2. ಉಚಿತ ಶುದ್ಧ ಕುಡಿಯುವ ನೀರು :ಯಾವುದೇ ಸ್ಥಳಕ್ಕೆ ಪ್ರಯಾಣ ಬೆಳೆಸುವಾಗ ಒಮ್ಮೊಮ್ಮೆ ನೀರಿನ ಅವಶ್ಯಕತೆ ಉಂಟಾಗುತ್ತದೆ. ಒಮ್ಮೊಮ್ಮೆ ಮನೆಯಿಂದ ನೀರನ್ನು ತರುವುದನ್ನು ಮರೆತುಬಿಡುತ್ತೇವೆ. ಈ ವೇಳೆ ನಾವು ಸಾಮಾನ್ಯವಾಗಿ ಅಂಗಡಿಗಳು ಅಥವಾ ಹೋಟೆಲ್ಗಳಲ್ಲಿ ಮಿನರಲ್ ಯುಕ್ತ ನೀರನ್ನು ಖರೀದಿಸುತ್ತೇವೆ. ನಿಮ್ಮ ಸಮೀಪದಲ್ಲಿ ಪೆಟ್ರೋಲ್ ಬಂಕ್ ಇದ್ದರೆ, ನೀರಿಗಾಗಿ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಲಾಗುತ್ತದೆ. ಲೈಸೆನ್ಸ್ ನೀಡುವಾಗ ಈ ಷರತ್ತಿಗೆ ಪೆಟ್ರೋಲ್ ಬಂಕ್ ಮಾಲೀಕರು ಒಪ್ಪಿರುತ್ತಾರೆ.
3. ಉಚಿತ ಶೌಚಾಲಯ ಸೌಲಭ್ಯ :ಪ್ರಯಾಣದ ಸಮಯದಲ್ಲಿ ನೀವು ಶೌಚಾಲಯವನ್ನು ಬಳಸಬೇಕಾದ ಅವಶ್ಯಕತೆ ಇದ್ದರೆ, ನೀವು ಪೆಟ್ರೋಲ್ ಬಂಕ್ಗಳಲ್ಲಿ ಉಚಿತ ಸೇವೆ ಪಡೆಯಬಹುದಾಗಿದೆ. ಅಂದರೆ ಪೆಟ್ರೋಲ್ ಬಂಕ್ಗಳ ಬಳಿ ಶೌಚಾಲಯ ನಿರ್ಮಿಸುವುದು ಮಾತ್ರವಲ್ಲದೇ, ಉಚಿತ ಬಳಕೆಗೆ ನೀಡುವುದು ಪೆಟ್ರೋಲ್ ಬಂಕ್ ಮಾಲೀಕರ ಕರ್ತವ್ಯವಾಗಿರುತ್ತದೆ. ಪೆಟ್ರೋಲ್ ಬಂಕ್ ಮಾಲೀಕರು ನಿಮಗೆ ಶೌಚಾಲಯವನ್ನು ಬಳಸಲು ಅನುಮತಿ ನೀಡದಿದ್ದರೆ ಅಥವಾ ಪೆಟ್ರೋಲ್ ಬಂಕ್ನಲ್ಲಿರುವ ಶೌಚಾಲಯವು ಸ್ವಚ್ಛತೆಯಿಂದ ಇರದಿದ್ದರೆ, ಅವರ ವಿರುದ್ಧ ದೂರು ದಾಖಲಿಸಬಹುದು. ಈ ವೇಳೆ ಅಧಿಕಾರಿಗಳು ಪೆಟ್ರೋಲ್ ಬಂಕ್ನ ಪರವಾನಿಗೆ ರದ್ದುಗೊಳಿಸಬಹುದು.