ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ಗೋಸ್ಕರ ಈಗಾಗಲೇ ಲಸಿಕೆ ನೀಡಲು ಶುರು ಮಾಡಿದ್ದು, ಇದೀಗ ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಕಾಶ ಜಾವಡೇಕರ್, ದೇಶಾದ್ಯಂತ ಮಾರ್ಚ್ 1ರಿಂದ ಎರಡನೇ ಹಂತದ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. 60 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ ಕೋ ಮಾರ್ಬಿಡಿಟಿ (ಬೇರೆ ರೋಗ ಇರುವ ವ್ಯಕ್ತಿಗಳು) ಇರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ
10 ಸಾವಿರ ಸರ್ಕಾರಿ ಹಾಗೂ 20 ಸಾವಿರ ಖಾಸಗಿ ನಿಯಂತ್ರಣ ಕೇಂದ್ರಗಳ ಮೂಲಕ ಲಸಿಕೆ ವಿತರಣೆ ಮಾಡಲಾಗುವುದು. ಈ ಹಿಂದೆ ಜನವರಿ ತಿಂಗಳಲ್ಲಿ ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನ ಆರಂಭ ಮಾಡಿದ್ದ ಭಾರತದಲ್ಲಿ ಕೊರೊನಾ ವಾರಿಯರ್ಸ್, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಲಸಿಕೆ ನೀಡಲಾಗಿದೆ.
ಫೆ. 24ರವರೆಗೆ ದೇಶದಲ್ಲಿ 1,21,65,598 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದು, ಇದರಲ್ಲಿ 64,98,300 (ಮೊದಲ ಹಂತ) ಆರೋಗ್ಯ ಕಾರ್ಯಕರ್ತರು, 13,98,400 (ಎರಡನೇ ಹಂತ) ಆರೋಗ್ಯ ಕಾರ್ಯಕರ್ತರು ಹಾಗೂ 42,68,898 ಫ್ರಂಟ್ಲೈನ್ ವರ್ಕರ್ಸ್ (ಮೊದಲ ಹಂತ)ಗೆ ಲಸಿಕೆ ನೀಡಲಾಗಿದೆ ಎಂದಿದ್ದಾರೆ.
ಸಚಿವರು ಹಣ ನೀಡಿ ಕೋವಿಡ್ ಲಸಿಕೆ: ರವಿ ಶಂಕರ್ ಪ್ರಸಾದ್
ಎಲ್ಲ ಸಚಿವರು ಹಣ ನೀಡಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.