ತ್ರಿಶೂರ್ (ಕೇರಳ):ಫಿಫಾ ವಿಶ್ವಕಪ್ ಗೆದ್ದು ಅರ್ಜೆಂಟೀನಾ ಐತಿಹಾಸಿಕ ಸಾಧನೆ ಮಾಡಿದ್ದರೆ, ಇತ್ತ ಕೇರಳದಲ್ಲಿ ಅಭಿಮಾನಿಗಳು ಸೋಮವಾರ 1500 ಜನರಿಗೆ ಉಚಿತವಾಗಿ ಚಿಕನ್ ಬಿರಿಯಾನಿ, ಹಲ್ವಾ ಮತ್ತು ಮೀನಿನ ಖಾದ್ಯ ಬಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಶನ್ ತನ್ನ ಟ್ವಿಟರ್ ಖಾತೆಯಲ್ಲಿ ಕೇರಳದ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದೆ.
ಕೇರಳದಲ್ಲಿ ಅರ್ಜೆಂಟೀನಾ ಫುಟ್ಬಾಲ್ ತಂಡಕ್ಕೆ ಅಭಿಮಾನಿಗಳ ಬಳಗವೇ ಇದೆ. ತ್ರಿಶೂರ್‌ನ ಹೋಟೆಲ್ ಮಾಲೀಕರೊಬ್ಬರು 1,500 ಜನರಿಗೆ ಉಚಿತ ಬಿರಿಯಾನಿ ನೀಡಿದರೆ, ಪಾಲಕ್ಕಾಡ್‌ನಲ್ಲಿ ಮೀನು ಮಾರಾಟಗಾರರೊಬ್ಬರು ಎಲ್ಲರಿಗೂ ಉಚಿತವಾಗಿ ಮೀನುಗಳನ್ನು ಹಂಚಿದ್ದಾರೆ. ಕೋಯಿಕ್ಕೋಡ್‌ನಲ್ಲಿ ಹಲ್ವಾ ಮಾರಾಟಗಾರ ಸಾರ್ವಜನಿಕರಿಗೆ 100 ಕೆಜಿ ಹಲ್ವಾವನ್ನು ಉಚಿತವಾಗಿ ನೀಡಿದ್ದಾರೆ. ಮಲಪ್ಪುರಂನ ಶಾಲಾ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳಿಗೆ ಅರೇಬಿಯನ್ ಮಾಂಸಾಹಾರಿ ಖಾದ್ಯವಾದ 'ಕಫ್ಸಾ' ಉಣಬಡಿಸಿದ್ದಾರೆ.
ಅರ್ಜೆಂಟೀನಾ ವಿಶ್ವಕಪ್ ಗೆದ್ದರೆ 1 ಸಾವಿರ ಜನರಿಗೆ ಉಚಿತವಾಗಿ ಬಿರಿಯಾನಿ ನೀಡುವುದಾಗಿ ಹೇಳಿದ್ದೆ. ಅದರಂತೆ ನನ್ನ ನೆಚ್ಚಿನ ತಂಡ ವಿಶ್ವಕಪ್ ಜಯಿಸಿದ ಕಾರಣ ಮಾತಿನಂತೆ ನಡೆದುಕೊಂಡು ಹೆಚ್ಚುವರಿಯಾಗಿ 500 ಮಂದಿ ಸೇರಿ 1500 ಜನರಿಗೆ ಉಚಿತವಾಗಿ ಚಿಕನ್ ಬಿರಿಯಾನಿಯನ್ನು ವಿತರಿಸಿದ್ದೇನೆ ಎಂದು ತ್ರಿಶೂರ್‌ನ ಹೋಟೆಲ್ ಮಾಲೀಕ ಶಿಬು ಹೇಳಿದರು.