ಧೋಲ್ಪುರ್: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೆಸರು ಬಳಸಿಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ16 ಲಕ್ಷ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಠಾಕೂರ್ ದಾಸ್ ವಂಚನೆಗೊಳಗಾದ ವ್ಯಕ್ತಿ. ಸಂದ್‌ಪುರ ಗ್ರಾಮದ ನಿವಾಸಿ ವಿನೋದ್‌ಕುಮಾರ್ ಎಂಬಾತ ಕಾಲೇಜು ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ, 16 ಲಕ್ಷ ರೂ.ಪಡೆದು ವಂಚಿಸಿ, ತಲೆಮರೆಸಿಕೊಂಡಿದ್ದಾನೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
ಠಾಕೂರ್ ದಾಸ್ ಅವರ ಅಳಿಯ ಅನಿಲ್ ಕುಮಾರ್ ಗೋಯೆಲ್ ಅವರಿಗೆ ಉತ್ತರಾಖಂಡದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ, ಆರೋಪಿ 18 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ ಠಾಕೂರದಾಸ್, ವಿನೋದಕುಮಾರ್ಗೆ 16 ಲಕ್ಷ ರೂ. ನೀಡಿದ್ದು, ಕೆಲಸ ಸಿಕ್ಕ ಬಳಿಕ 2 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾನೆ.
2018ರಲ್ಲಿ ಸಚಿನ್ ಪೈಲಟ್ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದಾಗಿನಿಂದ ನನಗೆ ಪರಿಚಯವಿದೆ. ಸಚಿನ್ ಪೈಲಟ್ ಉತ್ತರಾಖಂಡದ ಯುಕೆಪಿಎಸ್‌ಸಿ ಅಧ್ಯಕ್ಷರ ಆಪ್ತ ಸಹಾಯಕರಿಗೆ ಕರೆ ಮಾಡಿ ತಾವು ಸೂಚಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮಾತನಾಡಿ ನಿಮಗೂ ಸಹ ಕೆಲಸ ಕೊಡಿಸುತ್ತೇನೆ ಎಂದು ವಿನೋದಕುಮಾರ್ ಪುಸಲಾಯಿಸಿರುವುದಾಗಿ ವಂಚನೆಗೊಳಗಾದವರು ತಿಳಿಸಿದ್ದಾರೆ.