ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಹೊಸ ರೂಪಾಂತರದಿಂದ ಭಾರತ ಸೇರಿದಂತೆ ಅನೇಕ ದೇಶಗಳು ಬೆಚ್ಚಿಬಿದ್ದಿವೆ. ಈಗಾಗಲೇ ಈ ಸೋಂಕು ಕರ್ನಾಟಕದ ಮೂಲಕ ಭಾರತಕ್ಕೆ ಲಗ್ಗೆ ಹಾಕಿದ್ದು, ಇದರ ಬೆನ್ನಲ್ಲೇ ಗುಜರಾತ್ನಲ್ಲೂ ಪತ್ತೆಯಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಕೇಪ್ಟೌನ್ನಿಂದ ದುಬೈ ಮೂಲಕ ನವದೆಹಲಿಗೆ ಆಗಮಿಸಿದ್ದ ಮುಂಬೈ ಮೂಲದ 33 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಸೋಂಕು ಪತ್ತೆಯಾಗುತ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮುಂಚಿತವಾಗಿ ಗುಜರಾತ್ನ ಜಾಮ್ನಗರದ ವ್ಯಕ್ತಿ ಜಿಂಬಾಬ್ವೆಯಿಂದ ವಾಪಸ್ ಆಗಿದ್ದು, ಆತನಲ್ಲೂ ಈ ಹೊಸ ಸೋಂಕು ಕಂಡು ಬಂದಿದೆ. ಮಹಾರಾಷ್ಟ್ರದಲ್ಲೂ ಇಂದು ವೈರಸ್ ಕಾಣಿಸಿಕೊಂಡಿದ್ದು, ಇದು ಮೊದಲ ಪ್ರಕರಣವಾಗಿದೆ. ದೇಶದಲ್ಲಿ ಈವರೆಗೆ ನಾಲ್ಕು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಎರಡು ಕೇಸ್ಗಳು ಈಗಾಗಲೇ ದೃಢಪಟ್ಟಿವೆ.
ಇದನ್ನೂ ಓದಿರಿ:ವ್ಯಾಕ್ಸಿನ್ ಹಾಕಲು ಬಂದ ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ಹಲ್ಲೆ.. ವಿಡಿಯೋ ವೈರಲ್
ಒಮಿಕ್ರಾನ್ ಮಟ್ಟಹಾಕಲು ಈಗಾಗಲೇ ಕೇಂದ್ರ ಸರ್ಕಾರ ಅನೇಕ ಮಾರ್ಗಸೂಚಿ ಹೊರಡಿಸಿದ್ದು, ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯಗೊಳಿಸಿದೆ. ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಬಹುತೇಕ ಎಲ್ಲ ರಾಜ್ಯಗಳು ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಿವೆ.