ಅಮ್ರೇಲಿ (ಗುಜರಾತ್):ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರು ಯುವಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಕ್ಷಣಾ ತಂಡದೊಂದಿಗೆ ಶಾಸಕರೊಬ್ಬರು ಸಹ ಸಮುದ್ರಕ್ಕೆ ಹಾರಿದ ಸಾಹಸ ಮೆರೆದ ಘಟನೆ ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಇದರಲ್ಲಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರೂ ಓರ್ವ ಸಮುದ್ರದ ಪಾಲಾಗಿ ಪ್ರಾಣ ಕಳೆದುಕೊಂಡಿದ್ದಾನೆ.
ಅಮ್ರೇಲಿ ಜಿಲ್ಲೆಯ ಪಟ್ವಾ ಗ್ರಾಮದ ಬಳಿ ರಾಜುಲಾ ಸಮುದ್ರದಲ್ಲಿ ಸ್ನಾನಕ್ಕೆಂದು ಜೀವನ್ ಗುಜ್ರಿಯಾ, ಕಲ್ಪೇಶ್ ಶಿಯಾಲ್, ವಿಜಯ್ ಗುಜ್ರಿಯಾ ಮತ್ತು ನಿಕುಲ್ ಗುಜ್ರಿಯಾ ಎಂಬ ನಾಲ್ವರು ಯುವಕರು ಇಳಿದಿದ್ದರು. ಈ ವೇಳೆ, ಸಮುದ್ರದ ಸೆಳೆತ ಹೆಚ್ಚಾಗಿ ಎಲ್ಲರೂ ಮುಳುಗಲು ಪ್ರಾರಂಭಿಸಿದ್ದರು. ಅಂತೆಯೇ, ಈ ಯುವಕರು ಸಹಾಯಕ್ಕಾಗಿ ಕಿರುಚಲು ಶುರು ಸಹ ಮಾಡಿದ್ದರು. ಇದನ್ನು ಸಮುದ್ರ ತೀರದಲ್ಲಿದ್ದ ಜನರ ಗಮನಿಸಿ ರಕ್ಷಣೆ ಧಾವಿಸಿದ್ದರು.
ಇದೇ ವೇಳೆ, ಸುದ್ದಿ ತಿಳಿದ ಶಾಸಕ ಹೀರಾ ಸೋಲಂಕಿ ತಕ್ಷಣವೇ ಸಮುದ್ರದ ತೀರಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಕೂಡ ಕಡಲತೀರಕ್ಕೆ ಬಂದಿದ್ದಾರೆ. ಆಗ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕ ರಕ್ಷಣೆಗಾಗಿ ಇತರ ಈಜುಗಾರರೊಂದಿಗೆ ಶಾಸಕ ಹೀರಾ ಸೋಲಂಕಿ ಕೂಡ ಸಮುದ್ರಕ್ಕೆ ಹಾರಿದ್ದಾರೆ. ನಾಪತ್ತೆಯಾದವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿ ಮೂವರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.
ಆದರೆ, ದುರಾದೃಷ್ಟವಶಾತ್ ಜೀವನ್ ಗುಜ್ರಿಯಾ ಎಂಬ ಯುವಕನನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಎರಡು ಗಂಟೆಗಳ ಹುಡುಕಾಟದ ಬಳಿಕ ಜೀವನ್ ಗುಜ್ರಿಯಾ ಶವ ಪತ್ತೆಯಾಗಿದೆ. ಈ ಬಗ್ಗೆ ಹೀರಾ ಸೋಲಂಕಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದು, ಮೃತನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.