ಕರ್ನಾಟಕ

karnataka

ಗುಜರಾತ್​: ನಾಯಿ ದಾಳಿಯಿಂದ 4 ವರ್ಷದ ಮಗು ಸಾವು

By

Published : Feb 9, 2023, 6:12 PM IST

ನಾಯಿಗಳ ಹಿಂಡೊಂದು ದಾಳಿ ಮಾಡಿದ್ದರಿಂದ 4 ವರ್ಷದ ಮಗು ಮೃತಪಟ್ಟ ಘಟನೆ ಗುಜರಾತ್​ನಲ್ಲಿ ನಡೆದಿದೆ. ಖಾಲಿ ಜಾಗದಲ್ಲಿ ಪಾಲಕರೊಂದಿಗೆ ಮಲಗಿದ್ದ ಮಗುವಿನ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿವೆ.

Four-year-old mauled to death by stray dogs in Gujarat
Four-year-old mauled to death by stray dogs in Gujarat

ಸೂರತ್ (ಗುಜರಾತ್): ನಾಲ್ಕು ಬೀದಿನಾಯಿಗಳು ಸೇರಿಕೊಂಡು ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಮಗುವನ್ನು ಕೊಂದು ಹಾಕಿದ ದಾರುಣ ಘಟನೆ ಸೂರತ್​ನಲ್ಲಿ ನಡೆದಿದೆ. ಗುಜರಾತ್‌ನ ಸೂರತ್ ಜಿಲ್ಲೆಯ ಪಲ್ಸಾನಾ ತಾಲೂಕಿನ ಕರೇಲಿ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಮಗು ತನ್ನ ಪಾಲಕರೊಂದಿಗೆ ಮಿಲ್ ಕಾಂಪೌಂಡ್ ಆವರಣದಲ್ಲಿನ ಖಾಲಿ ಜಾಗದಲ್ಲಿ ಮಲಗಿತ್ತು. ಮಧ್ಯರಾತ್ರಿ ಮೂತ್ರವಿಸರ್ಜನೆಗೆಂದು ಎದ್ದ ಮಗು ಸ್ವಲ್ಪ ದೂರ ಹೋಗಿದೆ. ಆಗ ಇದ್ದಕ್ಕಿದ್ದಂತೆ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ಮಾಡಿವೆ. ನಾಯಿಗಳು ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಗು ಸತ್ತಿದೆ ಎಂದು ಅಲ್ಲಿನ ವೈದ್ಯರು ಘೋಷಿಸಿದರು. ಅಪಘಾತ ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ.

ಈ ಭೀಕರ ಘಟನೆ ಸಮೀಪದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಹಳ್ಳಿಯವನಾದ ಅಶೋಕ್ ಕುಕಾ ಮಾಚಾರ್ ಎಂಬಾತ ಕೇಜ್ರಿವಾಲ್ ಮಿಲ್ ಕಾಂಪೌಂಡ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನೇ ಮಗುವೇ ನಾಯಿ ದಾಳಿಯಿಂದ ಮೃತಪಟ್ಟಿದೆ. ದುಃಖಿತನಾಗಿರುವ ಆತ ಮಗುವಿನ ಶವದೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದಾನೆ.

ಮಗುವಿನ ಕಿರುಚಾಟ ಕೇಳಿದ ಪೋಷಕರು ಎಚ್ಚೆತ್ತುಕೊಂಡು ಮಗುವನ್ನು ನಾಯಿಗಳ ಹಿಡಿತದಿಂದ ಬಿಡಿಸಲು ಧಾವಿಸಿದ್ದರು. ಆದರೆ ಆಗಲೇ ತುಂಬಾ ತಡವಾಗಿತ್ತು. ಮಗು ತೀವ್ರವಾಗಿ ಗಾಯಗೊಂಡಿತ್ತು. ಮಗುವನ್ನು ನಾಯಿಗಳು ಸ್ಥಳದಿಂದ ಹಲವಾರು ಮೀಟರ್​ ದೂರ ಎಳೆದುಕೊಂಡು ಹೋಗಿದ್ದವು. ತೀವ್ರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ ಸೂರತ್‌ನ ಬಾರ್ಡೋಲಿ ಪ್ರದೇಶದಲ್ಲಿರುವ ಸರ್ದಾರ್ ಸ್ಮಾರಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಗು ಮೃತಪಟ್ಟಿದೆ ಎಂದು ಅಲ್ಲಿನ ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ರಾಜಸ್ಥಾನದಿಂದ ಬಂದ ಈ ವಲಸೆ ಕಾರ್ಮಿಕನ ಕುಟುಂಬ ಶೋಕದ ಮಡುವಿನಲ್ಲಿ ಮುಳುಗಿದೆ. ಸರಿಯಾದ ವಸತಿ ಸೌಕರ್ಯಗಳ ಕೊರತೆಯಿಂದಾಗಿ, ವಲಸೆ ಕಾರ್ಮಿಕರ ಕುಟುಂಬವು ಕೇಜ್ರಿವಾಲ್ ಮಿಲ್ ಕಾಂಪೌಂಡ್‌ನ ಖಾಲಿ ಜಾಗದಲ್ಲಿ ಅನಿವಾರ್ಯವಾಗಿ ಮಲಗಿತ್ತು ಎಂದು ಮೂಲಗಳು ತಿಳಿಸಿವೆ. ಬಾರ್ಡೋಲಿ ಸರ್ದಾರ್ ಸ್ಮಾರಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕನುಭಾಯಿ ಮಾತನಾಡಿ, ರಾತ್ರಿ ಮಗುವಿನ ಮೇಲೆ ನಾಲ್ಕು ಬೀದಿ ನಾಯಿಗಳು ದಾಳಿ ನಡೆಸಿವೆ. ಮಗು ತೀವ್ರವಾಗಿ ಗಾಯಗೊಂಡಿದೆ. ದೇಹಕ್ಕಾದ ತೀವ್ರ ಗಾಯಗಳಿಂದ ಮಗು ಮೃತಪಟ್ಟಿದೆ ಎಂದರು.

ಬಳ್ಳಾರಿಯಲ್ಲಿ ನಾಯಿ ದಾಳಿ: ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಕಚ್ಚಿದ್ದರಿಂದ ಇಬ್ಬರು ಮಕ್ಕಳು ಎರಡು ತಿಂಗಳ ಹಿಂದೆ ಮೃತಪಟ್ಟ ಘಟನೆ ನೆನಪಿನಿಂದ ಮಾಸುವ ಮುನ್ನವೇ ಮತ್ತೆ ಅಂಥದೇ ಘಟನೆ ನಡೆದಿದೆ. ಬೀದಿ ನಾಯಿಗಳ ದೊಡ್ಡ ಹಿಂಡು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ. ನಾಲ್ವರು ಗಾಯಾಳುಗಳನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ಐಸಿಯು ವಾರ್ಡ್‌ಗೆ ದಾಖಲಿಸಲಾಗಿದೆ. 20 ಗಾಯಾಳುಗಳಲ್ಲಿ ಏಳು ಮಕ್ಕಳು ಸೇರಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ನಾಯಿಗಳಿಗೆ ರೇಬಿಸ್ ಲಕ್ಷಣಗಳು ಕಂಡುಬಂದಿದೆ. ಆದರೆ ಪಾಲಿಕೆ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಶಾಲೆಗೆ ಹೋಗ್ತಿದ್ದಾಗ ಲಿಫ್ಟ್​ನಲ್ಲಿ ಬಾಲಕನ ಕೈ ಕಚ್ಚಿದ ನಾಯಿ: ವಿಡಿಯೋ

ABOUT THE AUTHOR

...view details