ಕುಶಿನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 16 ವರ್ಷದ ಬಾಲಕನೊಬ್ಬ ನಾಲ್ಕು ವರ್ಷದ ಬಾಲಕಿಯ ಮೇಲೆ ಒಂದೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಅತ್ಯಾಚಾರ ಎಸೆದ ಪ್ರಕರಣ ವರದಿಯಾಗಿದೆ. ಆಘಾತಕಾರಿ ಅಂಶ ಎಂದರೆ ಮೊದಲ ಬಾರಿ ಅತ್ಯಾಚಾರ ನಡೆದಾಗ ಗ್ರಾಮಸ್ಥರು ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಇದರ ನಂತರ ಆರೋಪಿ ಬಾಲಕ ಮತ್ತೊಮ್ಮೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಕಾರು, ಬೈಕ್ಗೆ ಗುದ್ದಿದ ಲಾರಿ: ಬಾಲಕಿ ಸೇರಿದಂತೆ ಐವರ ದುರ್ಮರಣ
ಇಲ್ಲಿನ ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ನೆರೆ ಹೊರೆಯಲ್ಲಿ ವಾಸಿಸುವ 16 ವರ್ಷದ ಆರೋಪಿಯೇ ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರಿಗೆ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದು, ಆರೋಪಿ ಬಾಲಕ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆಯ ವಿವರ?: ಒಂದು ತಿಂಗಳ ಹಿಂದೆ ಮನೆ ಸಮೀಪ ನಾಲ್ಕು ವರ್ಷದ ಬಾಲಕಿ ಆಟವಾಡುತ್ತಿದ್ದಳು. ಆಗ ನೆರೆಹೊರೆಯ ಅಪ್ರಾಪ್ತ ಬಾಲಕ ಮಿಠಾಯಿ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ನಂತರ ಬಾಲಕಿ ಮನೆಗೆ ಹಿಂದಿರುಗಿದಾಗ ಆಕೆಯ ಖಾಸಗಿ ಅಂಗಗಳಿಂದ ರಕ್ತ ಸ್ರಾವವಾಗಿತ್ತು. ಇದರಿಂದ ಆಘಾತಕೊಂಡಿದ್ದ ಪೋಷಕರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆಗ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು ಎಂದು ವರದಿಯಾಗಿದೆ.
ಇದಾದ ಬಳಿಕ ಗ್ರಾಮಸ್ಥರಿಗೆ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿರುವುದು ಗೊತ್ತಾಗಿತ್ತು. ಆದರೆ, ಆಗ ಗ್ರಾಮದ ಹಿರಿಯರು ನ್ಯಾಯ ಕೊಡಿಸುವ ಬದಲು ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು. ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಅವಕಾಶ ಕೊಡಲಿಲ್ಲ. ಒತ್ತಡ ತಂದು ರಾಜಿ ಮಾಡಲು ಯತ್ನಿಸಿದ್ದರು. ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡಿ, ಚಿಕಿತ್ಸೆಗೆ ತಗಲುವ ವೆಚ್ಚ ಭರಿಸುವ ಆಶ್ವಾಸನೆ ನೀಡಿದ್ದರು ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.
ಎರಡನೇ ಬಾರಿ ದೌರ್ಜನ್ಯ:ಮೊದಲ ಬಾರಿಗೆ ಗ್ರಾಮದ ಹಿರಿಯರು ಆರೋಪಿಯನ್ನು ಶಿಕ್ಷೆಗೆ ಒಳಪಡಿಸುವ ಬದಲು ಆತನನ್ನು ರಕ್ಷಣೆ ಮಾಡಿದ್ದರು. ಇದರ ಪರಿಣಾಮ ಎಂಬಂತೆ ಒಂದು ತಿಂಗಳ ಅವಧಿಯಲ್ಲಿ ಇದೀಗ ಮತ್ತೆ ಬಾಲಕಿ ಮೇಲೆ ಆರೋಪಿ ಎರಡನೇ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನೊಂದ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಗುರುವಾರ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಆರೋಪಿ ವಿರುದ್ಧ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು: ಬಾಲಕಿ ಮೇಲೆ ಅತ್ಯಾಚಾರದ ಬಗ್ಗೆ ಪೋಷಕರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಅಲ್ಲದೇ, ಶುಕ್ರವಾರ ಎರಡೂ ಕಡೆಯ ಕುಟುಂಬದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಆದರೆ, ಸದ್ಯಕ್ಕೆ ಆರೋಪಿ ಬಾಲಕ ಪತ್ತೆಯಾಗಿಲ್ಲ. ಇಡೀ ಘಟನೆ ತನಿಖೆ ಮಾಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧವಲ್ ಜೈಸ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ:ಬುಲ್ಡೋಜರ್ ಚಲಾಯಿಸಿ ಅತ್ಯಾಚಾರ ಆರೋಪಿಯ ಮನೆ ಧ್ವಂಸಗೊಳಿಸಿದ ಮಹಿಳಾ ಪೊಲೀಸರು!